ಶಿಥಿಲಾವಸ್ಥೆಗೆ ತಲುಪಿದ ಕಟ್ಟಡ: ನಿತ್ಯ ಕಣ್ಣೀರಿಡುತ್ತಿದೆ ವಾಣಿ ವಿಲಾಸ ಮಾರುಕಟ್ಟೆ

100ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ವಾಣಿ ವಿಲಾಸ ಮಾರುಕಟ್ಟೆ ಇದೀಗ ಶಿಥಿಲಾವಸ್ಥೆಯನ್ನು ತಲುಪಿದ್ದು, ಜನರು ಪ್ರತೀ ನಿತ್ಯ ಸಂಕಷ್ಟದಲ್ಲಿ ಜೀವನ ನಡೆಸುತ್ತಿರುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: 100ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ವಾಣಿ ವಿಲಾಸ ಮಾರುಕಟ್ಟೆ ಇದೀಗ ಶಿಥಿಲಾವಸ್ಥೆಯನ್ನು ತಲುಪಿದ್ದು, ಜನರು ಪ್ರತೀ ನಿತ್ಯ ಸಂಕಷ್ಟದಲ್ಲಿ ಜೀವನ ನಡೆಸುತ್ತಿರುವ ಪರಿಸ್ಥಿತಿ ಎದುರಾಗಿದೆ.

ಕೆಲ ವರ್ಷಗಳ ಹಿಂದೆ ಈ ಮಾರುಕಟ್ಟೆಗೆ ದೊಡ್ಡ ಹೊಡೆತವೊಂದು ಬಿದ್ದಿತ್ತು. ಮಹಾಮಳೆಯ ಹೊಡೆತಕ್ಕೆ ಸಿಲುಕಿ ಮಾರುಕಟ್ಟೆಯ ಮುಖ್ಯ ದ್ವಾರದ ಗೋಪುರ ಕುಸಿದು ಬಿದ್ದಿತ್ತು. ಪರಿಣಾಮ ಇಬ್ಬರು ಸಾವನ್ನಪ್ಪಿದ್ದರು. ದುರಂತ ಸಂಭವಿಸಿದ ಬಳಿಕ ಕೆಲ ದುರಸ್ತಿ ಕೆಲಸ ಮಾಡಿಸಿದ್ದ ಅಧಿಕಾರಿಗಳು, ಬಿದ್ದು ಹೋಗಿದ್ದ ಗೋಪುರವನ್ನಷ್ಟೇ ಸರಿಮಾಡಿಸಿದ್ದರು.

ಈ ಘಟನೆಯನ್ನು ಅಧಿಕಾರಿಗಳು ಮರೆತು ಹೋದಂತಿದೆ. ಸೂಕ್ತ ರೀತಿಯ ನಿರ್ವಹಣೆ ಇಲ್ಲದೆಯೇ ಮಾರುಕಟ್ಟೆ ಇದೀಗ ಶಿಥಿಲಾವಸ್ಥೆಯನ್ನು ತಲುಪಿದೆ. ಯಾವಾಗ ಏನಾಗುತ್ತದೆ ಎಂಬ ಭಯದಲ್ಲಿಯೇ ಸಾವಿರಾರು ವ್ಯಾಪಾರಸ್ಥರು ಜೀವನ ನಡೆಸುತ್ತಿದ್ದಾರೆ. ಗೋಪುರದ ಮೇಲೆ ಮತ್ತೆ ಮರಗಳ ರೆಂಬೆ-ಕೊಂಬೆಗಳು ಬೆಳೆದು ನಿಂತಿದೆ.

ಮುಖ್ಯದ್ವಾರದಲ್ಲಿಯೇ ಕೆಲ ಗೋಡೆಗಳು ಬಿರುಕು ಬಿಟ್ಟಿವೆ. ಇದಲ್ಲದೆ ಮಾರುಕಟ್ಟೆಯ ಒಳಾವರಣದಲ್ಲಿಯೂ ಗೋಡೆಗಳು ಬಿರುಕು ಬಿಟ್ಟಿದ್ದು, ಅಧಿಕಾರಿಗಳು ಕೂಡಲೇ ಸೂಕ್ತ ರೀತಿಯ ಕ್ರಮ ಕೈಗೊಳ್ಳದಿದ್ದರೆ ದುರಂತ ಸಂಭವಿಸುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ.

ಮಾರುಕಟ್ಟೆಯ ಪರಿಸ್ಥಿತಿ ಕುರಿತಂತೆ ಮಾತನಾಡಿರುವ ವಾಣಿ ವಿಲಾಸ ಮಾರುಕಟ್ಟೆ ಬಾಡಿಗೆದಾರರ ಸಂಘದ ಅಧ್ಯಕ್ಷ ಪಿ. ಜಯಪ್ರಕಾಶ್ ಅವರು, 20-25 ವರ್ಷಗಳ ಹಿಂದೆ ಕಟ್ಟಡವನ್ನು ಉರುಳಿಸಿ ಹೊಸದಾಗಿ ಕಟ್ಟುವ ಪ್ರಸ್ತಾಪವನ್ನು ಸರ್ಕಾರ ಇಟ್ಟಿತ್ತು. ಯೋಜನೆ ಜಾರಿಯಾಗಲು ವ್ಯಾಪಾರಸ್ಥರಿಗೆ ಹಾಗೂ ಅಂಗಡಿಯವರಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಅಧಿಕಾರಿಗಳು ಕಲ್ಪಿಸಬೇಕಿತ್ತು. ಆದರೆ, ಅಧಿಕಾರಿಗಳು ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆ ಜಾರಿಯಾಗಿಲ್ಲ ಎಂದು ಹೇಳಿದ್ದಾರೆ.

ಹೊಸ ಕಟ್ಟಡದ ಗೋಡೆಯಲ್ಲಿಯೂ ಬಿರುಕುಗಳು ಕಂಡುಬಂದಿದ್ದು, ಚಾವಣಿಗಳಲ್ಲಿ ನೀರು ಸೋರುತ್ತಿದೆ. ಮಾರುಕಟ್ಟೆಯಲ್ಲಿ ಎಂಸಿಸಿ ಅಧಿಕಾರಿಗಳು ಯಾವುದೇ ರೀತಿಯ ನಿರ್ವಹಣೆಯ ಕೆಲಸವನ್ನು ಮಾಡುತ್ತಿಲ್ಲ. ಮಾರುಕಟ್ಟೆಯಲ್ಲಿ 150ಕ್ಕೂ ಹೆಚ್ಚು ಬೀದಿ ವ್ಯಾಪಾರಿಗಳು ಹಾಗೂ ಅಂಗಡಿಯವರು ವ್ಯಾಪಾರ ಮಾಡುತ್ತಿದ್ದಾರೆ. ಅವರ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ಮೇಯರ್ ಬೈರಪ್ಪ ಅವರು ಪ್ರತಿಕ್ರಿಯೆ ನೀಡಿದ್ದು, ಹೊಸ ಕಟ್ಟಡ ನಿರ್ಮಾಣಕ್ಕಾಗಿ ಯೋಜನೆಯನ್ನು ರೂಪಿಸಲಾಗಿದೆ. ಈ ಬಗ್ಗೆ ಅಳತೆಯನ್ನೂ ತೆಗೆದುಕೊಳ್ಳಲಾಗಿದೆ. ವಾಣಿ ವಿಲಾಸ ಮಾರುಕಟ್ಟೆಯಲ್ಲಿ ಶಿಥಿಲಗೊಂಡಿರುವ ಕಟ್ಟಡವನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ಕುರಿತ ಪಟ್ಟಿಯನ್ನು ಅಧಿಕಾರಿಗಳು ಶೀಘ್ರದಲ್ಲಿಯೇ ಹೆಚ್.ಸಿ ಮಹದೇವಪ್ಪ ಅವರಿಗೆ ಸಲ್ಲಿಸಲಿದ್ದಾರೆ. ಸಭೆ ನಡೆಸಿದ ಬಳಿಕ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಮಾರುಕಟ್ಟೆಯಲ್ಲಿ ಮುಖ್ಯ ಸಮಸ್ಯೆಯೆಂದರೆ ಮೇಲ್ಚಾವಣಿಯಲ್ಲಿ ನೀರು ಸೋರಿಕೆಯಾಗುತ್ತಿರುವುದು. ಈ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರುಗಳನ್ನು ನೀಡಿದ್ದೇವೆ. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಪ್ರತೀ ನಿತ್ಯ 900-1200 ಜನರು ಮಾರುಕಟ್ಟೆಗೆ ಬರುತ್ತಿರುತ್ತಾರೆ. ವಾರಾಂತ್ಯದಲ್ಲಂತೂ ಜನರ ಸಂಖ್ಯೆ ದ್ವಿಗುಣಗೊಳ್ಳುತ್ತದೆ ಎಂದು ಮಂಡಿ ಮಾರುಕಟ್ಟೆ ಸಂಘದ ಅಧ್ಯಕ್ಷ ಪ್ರೇಮ್ ಕುಮಾರ್ ಅವರು ಹೇಳಿದ್ದಾರೆ.

ಹೊಸ ಸಯ್ಯಾಜಿರಾವ್ ರಸ್ತೆಯ ಆರಂಭದ ಬಿಂದು ಹಾಗೂ ವಾಣಿ ವಿಲಾಸ ರಸ್ತೆಗೆ ಕೂಡಿಕೊಳ್ಳುವ ಮಾಧವರಾವ್ ವೃತ್ತದಲ್ಲಿರುವ ಈ ವಾಣಿ ವಿಲಾಸ ಮಾರುಕಟ್ಟೆಯು 1927ರಲ್ಲಿ ನಿರ್ಮಾಣ ಮಾಡಲಾಗಿತ್ತು. ಯುರೋಪ್ ಪ್ರವಾಸ ಮುಗಿಸಿ ಬರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು, ಆ ದೇಶದ ಶಹರಗಳಲ್ಲಿ ಇರುವಂತೆಯೇ ಮೈಸೂರಿನ ಮೂಲೆಮೂಲೆಗಳಲ್ಲಿಯೂ ಮಾರುಕಟ್ಟೆ ವ್ಯವಸ್ಥೆ ಮಾಡಬೇಕೆಂದು ಚಿಂತಿಸುತ್ತಾರೆ. ಇದರಂತೆ ವಾಣಿ ವಿಲಾಸ ಹಾಗೂ ಮಂಡಿ ಮಾರುಕಟ್ಟೆಯನ್ನು ನಿರ್ಮಾಣ ಮಾಡುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com