ಸಾಂಸ್ಕೃತಿಕ ನಗರಿ ಮೈಸೂರಲ್ಲಿ 2017ರ ಕನ್ನಡ ಸಾಹಿತ್ಯ ಸಮ್ಮೇಳನ?

2017ರ ಕನ್ನಡ ಸಾಹಿತ್ಯ ಸಮ್ಮೇಳನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಲ್ಲಿ ನಡೆಯುವುದು ಬಹುತೇಕ ಖಚಿತವಾಗಿದ್ದು, ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರ ಬೀಳುವ ಸಾಧ್ಯತೆ ಇದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರಾಯಚೂರು: 2017ರ ಕನ್ನಡ ಸಾಹಿತ್ಯ ಸಮ್ಮೇಳನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಲ್ಲಿ ನಡೆಯುವುದು ಬಹುತೇಕ ಖಚಿತವಾಗಿದ್ದು, ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರ ಬೀಳುವ ಸಾಧ್ಯತೆ  ಇದೆ.

ಶನಿವಾರ ನಡೆದ ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗಿದ್ದು, ಬಹುತೇಕ ಜಿಲ್ಲಾ ಘಟಕಗಳ ಅಧ್ಯಕ್ಷರು ಮುಂದಿನ ಸಮ್ಮೇಳನವನ್ನು ಮೈಸೂರಿನಲ್ಲಿ ನಡೆಸುವ ಬಗ್ಗೆ  ಒಲವು ತೋರಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚಿನ ವರ್ಷಗಳಲ್ಲಿನ ಸಂಪ್ರದಾಯದಂತೆ ಒಂದು ವರ್ಷ ಉತ್ತರ ಕರ್ನಾಟಕದಲ್ಲಿ ಸಮ್ಮೇಳನ ನಡೆದರೆ ಬಳಿಕದ ವರ್ಷ ದಕ್ಷಿಣ ಕರ್ನಾಟಕದಲ್ಲಿ ಸಮ್ಮೇಳನ ಆಯೋಜಿಸಲಾಗುತ್ತಿದೆ. ಅದರಂತೆ ಈ ಬಾರಿ ರಾಯಚೂರಿನಲ್ಲಿ ಸಮ್ಮೇಳನ ನಡೆದಿದ್ದು, ಮುಂದಿನ ಸಮ್ಮೇಳನವನ್ನು ದಕ್ಷಿಣ ಕರ್ನಾಟಕದಲ್ಲಿ ನಡೆಸಬೇಕಿದೆ.

ಇದೇ ಸಂಪ್ರದಾಯದಂತೆ ಮುಂಬರುವ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಕ್ಷಿಣ ಕರ್ನಾಟಕದಲ್ಲಿ ನಡೆಸಲು ನಿರ್ಧರಿಸಲಾಗಿದ್ದು. ಕಳೆದ ವರ್ಷ ಹಾಸನದ ಶ್ರವಣಬೆಳಗೊಳದಲ್ಲಿ ಸಮ್ಮೇಳನ ನಡೆದಿತ್ತು. ಈ  ಹಿನ್ನೆಲೆಯಲ್ಲಿ ಮುಂದಿನ ವರ್ಷ ಮೈಸೂರಿನಲ್ಲಿ ನಡೆಸುವುದು ಸರಿ ಎಂದು ಬಹುತೇಕ ಜಿಲ್ಲಾಧ್ಯಕ್ಷರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಸಮ್ಮೇಳನ ಆಯೋಜನೆ ಪಟ್ಟಿಯಲ್ಲಿ ಮೈಸೂರಿಗೆ ಧಾರವಾಡ ಪ್ರಬಲ ಪೈಪೋಟಿ
ಇದೇ ವೇಳೆ, 83ನೇ ಸಮ್ಮೇಳನ ನಡೆಸಲು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಘಟಕದ ಕೆಲ ಸದಸ್ಯರು ಕೂಡ ಒಲವು ತೋರಿದ್ದು, ಅದಕ್ಕಿಂತ ಹೆಚ್ಚಾಗಿ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್‌ ಘಟಕ ಮುಂದಿನ  ಸಮ್ಮೇಳನ ತನ್ನ ಜಿಲ್ಲೆಯಲ್ಲೇ ನಡೆಯಬೇಕೆಂದು ಆಗ್ರಹಿಸಿದೆ. ಶನಿವಾರ ಮುಖ್ಯವೇದಿಯಲ್ಲಿ ವಿಚಾರಗೋಷ್ಠಿ ನಡೆಯುವ ವೇಳೆ ಚಿಕ್ಕಮಗಳೂರು ಜಿಲ್ಲೆಯ ಕನ್ನಡಾಭಿಮಾನಿಗಳು ಪ್ರತಿಭಟನೆ ನಡೆಸಿ ತಮ್ಮ ಜಿಲ್ಲೆಯಲ್ಲೇ ಸಮ್ಮೇಳನ  ನಡೆಸಬೇಕೆಂದು ಆಗ್ರಹಿಸಿದರು

ಈ ಎಲ್ಲ ಬೆಳವಣಿಗೆ ಮುಂದಿನ ಅಕ್ಷರ ಜಾತ್ರೆ ಯಾವ ಜಿಲ್ಲೆಯ ಪಾಲಾಗಲಿದೆ ಎಂಬ ಕುತೂಹಲ ಮೂಡಿಸಿದ್ದು, ಶೀಘ್ರದಲ್ಲೇ ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ನೀಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com