
ಬೆಂಗಳೂರು: ಭಾರೀ ಪ್ರಮಾಣ ಭ್ರಷ್ಟಾಚಾರದಲ್ಲಿ ಸಿಕ್ಕಿಹಾಕಿಕೊಂಡಿರುವ ರಾಜ್ಯ ಹೆದ್ದಾರಿ ಮುಖ್ಯ ಯೋಜನಾಧಿಕಾರಿ ಎಸ್.ಸಿ.ಜಯಚಂದ್ರಗೆ ಗುರುವಾರ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಸಿಬಿಐ ವಿಶೇಷ ಕೋರ್ಟ್ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಆದರೆ ಷರತ್ತುಗಳನ್ನು ಪೂರ್ಣಗೊಳಿಸದ ಕಾರಣ ಅವರನ್ನು ಒಂದು ದಿನದ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ಎಸ್.ಸಿ. ಜಯಚಂದ್ರ ವಿರುದ್ಧ ಜಾರಿ ನಿರ್ದೇಶನಾಲಯ, ಸಿಬಿಐ ಹಾಗೂ ಎಸಿಬಿ ತನಿಖಾ ಸಂಸ್ಥೆಗಳು ಪ್ರಕರಣ ದಾಖಲಿಸಿದ್ದವು. ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಇಂದು ಸಿಬಿಐನ ವಿಶೇಷ ಕೋರ್ಟ್ ಮಧ್ಯಂತರ ಜಾಮೀನು ನೀಡಿತು. ನಾಳೆ ಷರತ್ತುಗಳನ್ನು ಪೂರೈಸಿ ಜಾಮೀನು ಪಡೆದರೆ, ಅವರನ್ನು ಸಿಬಿಐ ಬಂಧಿಸಲಿದೆ ಎಂದು ಮೂಲಗಳು ತಿಳಿಸಿವೆ.
ಜಯಚಂದ್ರ ಅವರಿಗೆ ಜಾಮೀನು ದೊರೆತ ಬಳಿಕ, ಷರತ್ತಿನ ಅನ್ವಯ ಪಾಸ್‌ಪೋರ್ಟ್ಅನ್ನು ನ್ಯಾಯಾಲಯದ ವಶಕ್ಕೆ ನೀಡಲು ವಿಫಲರಾದ ಕಾರಣ ಒಂದು ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. ಜಯಚಂದ್ರಗೆ ಜಾಮೀನು ದೊರೆತರೂ ಬಿಡುಗಡೆಯಾಗಲಿಲ್ಲ. ಇನ್ನು ಎಸಿಬಿ ಕೂಡ ಜಯಚಂದ್ರ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಿದೆ.
ಜಯಚಂದ್ರ ಮನೆ ಮೇಲೆ ಸಿಬಿಐ, ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾಗ ಕೋಟಿ, ಕೋಟಿ ಹೊಸ ನೋಟು, ಚಿನ್ನದ ಗಟ್ಟಿ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿತ್ತು.
Advertisement