ಬೆಂಗಳೂರು: ಮೂಸಂಬಿಯಲ್ಲಿ ಗಾಂಜಾ ಇಟ್ಟು ಜೈಲಿಗೆ ಸಾಗಿಸುತ್ತಿದ್ದವರ ಬಂಧನ

ಕಾರಾಗೃಹದ ಕೈದಿಗಳಿಗೆ ಸರಬರಾಜಾಗುವ ಮಾದಕ ವಸ್ತು ಪತ್ತೆಗೆ ಜೈಲಿನ ಹೊರಗೆ ಸ್ಕ್ಯಾ‌ನಿಂಗ್‌ ಯಂತ್ರ ಇರಿಸಿದ್ದರೂ ಮೂಸಂಬಿ ಹಣ್ಣು ಹಾಗೂ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಾರಾಗೃಹದ ಕೈದಿಗಳಿಗೆ ಸರಬರಾಜಾಗುವ ಮಾದಕ ವಸ್ತು ಪತ್ತೆಗೆ ಜೈಲಿನ ಹೊರಗೆ ಸ್ಕ್ಯಾ‌ನಿಂಗ್‌ ಯಂತ್ರ ಇರಿಸಿದ್ದರೂ ಮೂಸಂಬಿ ಹಣ್ಣು ಹಾಗೂ ಬಿರಿಯಾನಿಯೊಳಗೆ ಗಾಂಜಾ ಪ್ಯಾಕೇಟ್‌ ಇಟ್ಟು ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ.

ಮೂಸಂಬಿ ಹಣ್ಣು, ಬಿರಿಯಾನಿ ಪೊಟ್ಟಣಗಳಲ್ಲಿ ಗಾಂಜಾ ತುಂಬಿ, ಅದನ್ನು ಜೈಲಿನಲ್ಲಿರುವ ಸ್ನೇಹಿತರಿಗೆ ತಲುಪಿಸುವ ಯತ್ನದಲ್ಲಿದ್ದ ಮೂವರು ಯುವಕರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಪ್ರವೇಶ ದ್ವಾರದಲ್ಲೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
 
ಬಾಪೂಜಿನಗರ ನಿವಾಸಿಗಳಾದ ಸಂಜಯ್ (20) ಹಾಗೂ ನವೀನ್ (26) ಎಂಬುವರು, ನ್ಯಾಯಾಂಗ ಬಂಧನದಲ್ಲಿರುವ ಗೆಳೆಯ ಅಶೋಕ್‌ನಿಗೆ ಗಾಂಜಾ ಕೊಡಲು ಡಿ.5ರಂದು ಜೈಲಿನ ಬಳಿ ಬಂದಿದ್ದರು. ಅವರನ್ನು ಬಂಧಿಸಿ, 402 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. ಇನ್ನೊಬ್ಬ ಆರೋಪಿ ಕುಮಾರ್ ತಲೆಮರೆಸಿಕೊಂಡಿದ್ದಾನೆ ಎಂದು ಪರಪ್ಪನ ಅಗ್ರಹಾರ ಪೊಲೀಸರು ತಿಳಿಸಿದ್ದಾರೆ.

ಕುಮಾರ್‌ನಿಂದ ಗಾಂಜಾ ತೆಗೆದುಕೊಂಡಿದ್ದ ಬಂಧಿತರು, ಅದನ್ನು ಮೂಸಂಬಿ ಹಣ್ಣಿನಲ್ಲಿ ತುಂಬಿದ್ದರು. ಸಿಪ್ಪೆ ಸುಲಿದು ಹಣ್ಣಿನ ತಿರುಳನ್ನು ಹೊರ ತೆಗೆದಿದ್ದ ಅವರು, ನಂತರ ಅದರಲ್ಲಿ ಗಾಂಜಾ ತುಂಬಿ ಫೆವಿಕ್ವಿಕ್ ಗಮ್‌ನಿಂದ ಪುನಃ ಸಿಪ್ಪೆ ಮುಚ್ಚಿದ್ದರು.
 
ಅದನ್ನು ತೆಗೆದುಕೊಂಡು ಬೆಳಿಗ್ಗೆ 11.30ರ ಸುಮಾರಿಗೆ ಜೈಲಿನ ಬಳಿ ಹೋದ ಅವರು, ಅಶೋಕ್‌ಗೆ ಹಣ್ಣು ಕೊಡಬೇಕೆಂದು ಹೇಳಿದ್ದರು.  ಸಿಪ್ಪೆಯ ಮೇಲಿದ್ದ ಗಮ್‌ಕಲೆ ನೋಡಿದ ಸಿಬ್ಬಂದಿ, ಅನುಮಾನದಿಂದ ಸಿಪ್ಪೆ ಸುಲಿದು ನೋಡಿದಾಗ ಗಾಂಜಾ ಪತ್ತೆಯಾಗಿದೆ. ಕೂಡಲೇ ಅವರನ್ನು ಹಿಡಿದುಕೊಂಡು ಪರಪ್ಪನ ಅಗ್ರಹಾರ ಠಾಣೆಗೆ ಒಪ್ಪಿಸಿದ್ದಾರೆ.
 
ಬಿರಿಯಾನಿ ಪ್ರಕರಣ: ಡಿ.7ರಂದು ಬಿರಿಯಾನಿ ಪೊಟ್ಟಣದಲ್ಲಿ ಗಾಂಜಾ ತುಂಬಿ ಜೈಲಿಗೆ ಹೊರಟಿದ್ದ ಸಂಜಯ್ ಅಲಿಯಾಸ್ ಸಂಜು ಎಂಬ ಇನ್ನೊಬ್ಬ ಚಾಲಕಿಯೂ ಪೊಲೀಸರ ಬಲೆಗೆ ಬಿದ್ದು ಕಾರಾಗೃಹದ ಅತಿಥಿಯಾಗಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com