
ಬೆಂಗಳೂರು: 2000 ರು ಹೊಸನೋಟುಗಳ 10 ಲಕ್ಷ ರುಪಾಯಿಗಾಗಿ ಉದ್ಯಮಿಯನ್ನು ಆತನ ನಾಲ್ಕು ಸ್ನೇಹಿತರೇ ಕೊಂದು ಸುಟ್ಟು ಹಾಕಿರುವ ಘಟನೆ ರಾಮನಗರದಲ್ಲಿ ನಡೆದಿದೆ.
ಚನ್ನಪಟ್ಟಣದ ಕಲಾನಾಗರ ನಿವಾಸಿ ಸತ್ತಾರ್ ಅಲಿ ಕೊಲೆಯಾದ ದುರ್ದೈವಿ. ಚನ್ನಪಟ್ಟಣದ ನಿವಾಸಿಗಳಾದ ಅಲ್ತಾಫ್, ಮೋಹಾಬ್, ಸೈಯ್ಯದ್ ಮತ್ತು ಅಕ್ಬರ್ 10 ಲಕ್ಷ ಹಣಕ್ಕಾಗಿ ಸತ್ತಾರ್ ಅಲಿಯನ್ನು ಕೊಂದು ಸುಟ್ಟು ಹಾಕಿರುವ ಆರೋಪಿಗಳು.
ಹಲವು ವರ್ಷಗಳಿಂದ ಕೊಲೆಯಾದ ಸತ್ತಾರ್ ಗೂ ಆರೋಪಿಗಳಿಗೂ ಸ್ನೇಹವಿತ್ತು. ಡಿಸೆಂಬರ್ 16 ರಂದು ಸತ್ತಾರ್ ಅಲಿಗೆ ಕರೆ ಮಾಡಿದ ಆರೋಪಿಗಳು ತಮ್ಮ ಬಳಿಯಿರುವ ಹಳೇಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಿಸಿಕೊಂಡು ಅದಕ್ಕಾಗಿ ನಿನಗೆ ಶೇ.20 ರಷ್ಟು ಕಮಿಷನ್ ಹಣ ನೀಡುತ್ತೇವೆ ಎಂದು ಹೇಳಿದ್ದಾರೆ. ಇದಕ್ಕೊಪ್ಪಿದ ಆತ ಹಣವನ್ನು ಬದಲಾಯಿಸಿಕೊಂಡು ಬಂದಿದ್ದಾನೆ.
ಚನ್ನಪಟ್ಟಣ ಬಳಿಯ ತೆಂಗಿನಕಲ್ಲು ಅರಣ್ಯ ಪ್ರದೇಶಕ್ಕೆ ಸತ್ತಾರ್ ಅಲಿಯನ್ನು ಕರೆದೊಯ್ದ ಆರೋಪಿಗಳು ಆತನನ್ನು ಕೊಂದು , ಅಲ್ಲಿಯೇ ಸುಟ್ಟು ಹಾಕಿ 10 ಲತ್ರ ರು ಹಣದೊಂದಿಗೆ ಅಲ್ಲಿಂದ ಪರಾರಿಯಾಗಿದ್ದರು. ಡಿಸೆಂಬರ್ 18 ರಂದು ಸುಟ್ಟ ಶವ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ತನಿಖೆ ನಡೆಸಿದ ಪೊಲೀಸರು ಸತ್ತಾರ್ ಅಲಿ ಮೊಬೈಲ್ ಕರೆಗಳ ಆಧಾರದ ಮೇಲೆ ವಿಚಾರಣೆ ನಡೆಸಿದಾಗ ಆರೋಪಿಗಳ ಸುಳಿವು ಸಿಕ್ಕಿದೆ. ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ ಆರೋಪಿಗಳನ್ನು ಕೊಲ್ಲುವಂತೆ ಆಗ್ರಹಿಸಿ ಇಸ್ಲಾಂಮಿಕ್ ಕಮ್ಯುನಿಟಿ ಸದಸ್ಯರು ಚನ್ನಪಟ್ಟಣ ಪೊಲೀಸ್ ಠಾಣೆ ಬಳಿ ಪ್ರತಿಭಟನೆ ನಡೆಸಿದರು.
Advertisement