ಬೆಂಗಳೂರು: ಉದ್ಯಮಿಯಿಂದ 18 ಲಕ್ಷ ರು ದೋಚಿದ್ದ 7 ಮಂದಿ ಬಂಧನ

ವ್ಯಾಪಾರಿಯೊಬ್ಬರಿಂದ ರು. 18 ಲಕ್ಷ ದೋಚಿ ಪರಾರಿಯಾಗಿದ್ದ 7 ಮಂದಿಯ ತಂಡವನ್ನು ನಂದಿನಿಲೇಔಟ್ ಪೊಲೀಸರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವ್ಯಾಪಾರಿಯೊಬ್ಬರಿಂದ ರು. 18 ಲಕ್ಷ ದೋಚಿ ಪರಾರಿಯಾಗಿದ್ದ 7 ಮಂದಿಯ ತಂಡವನ್ನು  ನಂದಿನಿಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಶ್ರೀನಾಥ್, ಚೇತನ್, ತ್ಯಾಗರಾಜ್, ಸಾಗರ್, ಗಿರೀಶ್, ಮಣಿ ಹಾಗೂ ರೋಹಿತ್ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ  6.60 ಲಕ್ಷ ನಗದು ಹಾಗೂ ಕದ್ದೊಯ್ದಿದ್ದ ಕಾರನ್ನು ಜಪ್ತಿ ಮಾಡಲಾಗಿದೆ. ಉಳಿದ ಹಣದ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ಸಂಬಂಧ ಮಹದೇವಪುರ ನಿವಾಸಿ ಪ್ರದೀಪ್ ಎಂಬುವರು ದೂರು ಕೊಟ್ಟಿದ್ದರು. ಅಂಗಡಿಗಳಿಗೆ ಸ್ಟೇಷನರಿ ವಸ್ತುಗಳನ್ನು ಪೂರೈಸುವ ಅವರಿಗೆ, ಸ್ನೇಹಿತನ ಮುಖಾಂತರ ಆರೋಪಿ ರೋಹಿತ್‌ನ ಪರಿಚಯವಾಗಿತ್ತು.

ಹಳೇ ನೋಟುಗಳು ರದ್ದಾದ ಬಳಿಕ ರೋಹಿತ್ ಕಮಿಷನ್ ಲೆಕ್ಕದಲ್ಲಿ ಹಣ ಬದಲಾವಣೆ ಮಾಡಿಸಿಕೊಡುವ ದಂಧೆ ನಡೆಸುತ್ತಿದ್ದ. ಪ್ರದೀಪ್‌ಗೆ ಹಣದ ಆಮಿಷ ಒಡ್ಡಿದ ಆತ, ‘ನನ್ನ ಸ್ನೇಹಿತರ ಬಳಿ ರು. 25 ಲಕ್ಷ ಮೌಲ್ಯದ ಹಳೇ ನೋಟುಗಳಿವೆ. ಯಾರಾದರೂ  18 ಲಕ್ಷ ಮೌಲ್ಯದ ಹೊಸ ನೋಟುಗಳನ್ನು ಕೊಟ್ಟರೆ, ಅಷ್ಟೂ ಹಣ ಕೊಡುವುದಾಗಿ ಹೇಳುತ್ತಿದ್ದಾರೆ’ ಎಂದಿದ್ದ.

ಹೆಚ್ಚು ಕಮಿಷನ್ ಸಿಗುತ್ತದೆ ಎಂಬ ಆಸೆಗೆ ಬಿದ್ದ ಪ್ರದೀಪ್, ತಾನೇ ರು 18 ಲಕ್ಷ ಹೊಂದಿಸಿ ಬರುವುದಾಗಿ ಹೇಳಿದ್ದರು. 18 ಲಕ್ಷ ಹೊಂದಿಸಿದ ಪ್ರದೀಪ್,  ಡಿ.15ರ ರಾತ್ರಿ 7.30ರ ಸುಮಾರಿಗೆ ಹಣ ತೆಗೆದುಕೊಂಡು ಕಾರಿನಲ್ಲಿ ನಂದಿನಿಲೇಔಟ್ ವಾಟರ್ ಟ್ಯಾಂಕ್‌ ಬಳಿ ಬಂದಿದ್ದರು. ಈ ವೇಳೆ ಮಚ್ಚು–ಲಾಂಗುಗಳಿಂದ ಏಕಾಏಕಿ ದಾಳಿ ನಡೆಸಿದ್ದ ಆರೋಪಿಗಳು, ಅವರನ್ನು ಬೆದರಿಸಿ ಹಣ ತೆಗೆದುಕೊಂಡು ಕಾರಿನ ಸಮೇತ ಪರಾರಿಯಾಗಿದ್ದರು. ಹಣ ಕದ್ದೊಯ್ದ ಸಂಬಂಧ ಪ್ರದೀಪ್ ನಂದಿನಿಲೇಔಟ್ ಠಾಣೆಗೆ ದೂರು ಕೊಟ್ಟಿದ್ದರು.

ಮೊಬೈಲ್ ಕರೆ ವಿವರ (ಸಿಡಿಆರ್) ಪರಿಶೀಲಿಸಿದಾಗ ರೋಹಿತ್‌ನ ಮೊಬೈಲ್ ಸಂಖ್ಯೆಯಿಂದ ಹಲವು ಕರೆಗಳು ಬಂದಿರುವುದು ಗೊತ್ತಾಯಿತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com