ಅಕ್ರಮ-ಸಕ್ರಮ ಯೋಜನೆಯಡಿ ಶುಲ್ಕ ಕಡಿಮೆ ಮಾಡಲು ಸಚಿವ ಸಂಪುಟ ತೀರ್ಮಾನ: ಟಿ.ಬಿ.ಜಯಚಂದ್ರ

ಅಕ್ರಮ-ಸಕ್ರಮ ಯೋಜನೆಯಲ್ಲಿ ವಿಧಿಸಿರುವ ಶುಲ್ಕದ ಪ್ರಮಾಣವನ್ನು ಕಡಿಮೆ ಮಾಡಲು ರಾಜ್ಯ ಸಚಿವ...
ಕಾನೂನು ಸಚಿವ ಟಿ.ಬಿ.ಜಯಚಂದ್ರ
ಕಾನೂನು ಸಚಿವ ಟಿ.ಬಿ.ಜಯಚಂದ್ರ
ಬೆಂಗಳೂರು: ಅಕ್ರಮ-ಸಕ್ರಮ ಯೋಜನೆಯಲ್ಲಿ ವಿಧಿಸಿರುವ ಶುಲ್ಕದ ಪ್ರಮಾಣವನ್ನು ಕಡಿಮೆ ಮಾಡಲು ರಾಜ್ಯ ಸಚಿವ ಸಂಪುಟವು ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ  ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ. ಬಿ. ಜಯಚಂದ್ರ, ಗ್ರಾಮೀಣ ಮತ್ತು ನಗರ ಪ್ರದೇಶದ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿ ಅದರಲ್ಲಿ ವಾಸವಾಗಿರುವವರಿಗೆ ಸಕ್ರಮ ಮಾಡಿ ಕೊಡಲು ಅನುವಾಗುವಂತೆ ತಂದ ಕರ್ನಾಟಕ ಭೂ ಕಂದಾಯ ಕಾಯಿದೆಯ ಪರಿಚ್ಛೇದ 94 (ಸಿ) ಮತ್ತು 94 (ಸಿ ಸಿ) ಗೆ ತಿದ್ದುಪಡಿಯಲ್ಲಿ ಸಕ್ರಮ ಮಾಡಿಕೊಳ್ಳಲು ಪ್ರಸ್ತುತ ವಿಧಿಸಲಾಗಿರುವ ಮೊತ್ತದ ಪ್ರಮಾಣವು ದುಬಾರಿ ಎಂದು ಭಾವಿಸಿದ ಸಚಿವ ಸಂಪುಟದ ಉಪ ಸಮಿತಿಯ ಶಿಫಾರಸ್ಸನ್ನು ಪರಿಗಣಿಸಿ ರಾಜ್ಯ ಸಚಿವ ಸಂಪುಟ ಈ ತೀರ್ಮಾನವನ್ನು ಕೈಗೊಂಡಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ 30×40, 40×60 ಹಾಗೂ 50×80 ವಿಸ್ತೀರ್ಣದ ನಿವೇಶನದಲ್ಲಿ ನಿರ್ಮಿಸಿದ ಮನೆಗಳಿಗೆ ಈ ಮೊದಲು ವಿಧಿಸಲಾಗಿದ್ದ ಸಕ್ರಮದ ಒಟ್ಟಾರೆ ಶುಲ್ಕವನ್ನು 2,000 ದಿಂದ 1,000 ರೂಪಾಯಿಗಳಿಗೆ, 4,000 ರೂಪಾಯಿಗಳಿಂದ 2,000 ರೂಪಾಯಿಗಳಿಗೆ ಹಾಗೂ 8,000ದಿಂದ 3,000 ರೂಪಾಯಿಗಳಿಗೆ ಕಡಿಮೆ ಮಾಡಲು ಸಂಪುಟ ಅನುಮೋದನೆ ನೀಡಿದೆ. 
ನಗರ ಪ್ರದೇಶದಲ್ಲಿ 20×30 ವಿಸ್ತೀರ್ಣದ ನಿವೇಶದಲ್ಲಿ ನಿರ್ಮಿಸಿರುವ ಮನೆಗಳಿಗೆ ಸಕ್ರಮದ ಶುಲ್ಕವನ್ನು 10,000 ರೂಪಾಯಿಗಳಿಂದ 5,000 ರೂಪಾಯಿಗಳಿಗೆ ಇಳಿಕೆ ಮಾಡಲು ಕೂಡ ಸಂಪುಟ ಒಪ್ಪಿಗೆ ನೀಡಿದೆ. ಅಂತೆಯೇ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ವಿಶೇಷ ಚೇತನರಿಗೆ ಈ ಮೊತ್ತದ ಅರ್ಧದಷ್ಟು ಅಂದರೆ ಶೇಕಡಾ 50 ರಷ್ಟು ರಿಯಾಯಿತಿ ನೀಡಿ 2,500 ರೂಪಾಯಿ ಶುಲ್ಕ ವಿಧಿಸಿ ಸಕ್ರಮ ಮಾಡಿಕೊಡಲು ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವರು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com