ಪಾನಮತ್ತಳಾಗಿ ಕಾರುಗಳಿಗೆ ಡಿಕ್ಕಿ ಹೊಡೆದ ಚಾಲಕಿ; ಉದ್ರಿಕ್ತ ಗುಂಪಿನಿಂದ ಹಲ್ಲೆ

ಕುಡಿದ ಮತ್ತಿನಲ್ಲಿ ಮಹಿಳಾ ಕಾರು ಚಾಲಕಿ ಬೇರೆ ಕಾರುಗಳಿಗೆ ಡಿಕ್ಕಿ ಹೊಡೆದಿದ್ದಕ್ಕೆ ಸಿಟ್ಟುಗೊಂಡ ಗುಂಪೊಂದು ಹಲ್ಲೆ ನಡೆಸಿರುವ ಘಟನೆ...
ವಾಹನಗಳಿಗೆ ಡಿಕ್ಕಿ ಹೊಡೆದ ಕಾರು
ವಾಹನಗಳಿಗೆ ಡಿಕ್ಕಿ ಹೊಡೆದ ಕಾರು

ಬೆಂಗಳೂರು: ಕುಡಿದ ಮತ್ತಿನಲ್ಲಿ ಮಹಿಳಾ ಕಾರು ಚಾಲಕಿ ಬೇರೆ ಕಾರುಗಳಿಗೆ ಡಿಕ್ಕಿ ಹೊಡೆದಿದ್ದಕ್ಕೆ ಸಿಟ್ಟುಗೊಂಡ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ನಗರದ ರೆಸಿಡೆನ್ಸಿ ರಸ್ತೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ದೆಹಲಿ ಮೂಲದ ಅನಿವಾಸಿ ಭಾರತೀಯ ಮಹಿಳೆ ಅಭಿಲಾಶ ಸೇತಿ ಯಲಹಂಕದ ನಿವಾಸಿಯಾಗಿದ್ದಾರೆ. ಆಕೆ ತನ್ನ ಮೂವರು ಸ್ನೇಹಿತೆಯರೊಂದಿಗೆ  ಲ್ಯಾವಲ್ಲೆ ರಸ್ತೆಯಲ್ಲಿರುವ ಹೊಟೇಲೊಂದರಲ್ಲಿ ಭಾನುವಾರ ರಾತ್ರಿ ಪಾರ್ಟಿ ಮಾಡುತ್ತಿದ್ದರು. ಆಗ ಹಿಮಾಂಶು ಎಂಬಾಕೆ ಪಾರ್ಟಿ ವೇಳೆ ಬಿದ್ದು ಗಾಯಗಳಾಗಿದ್ದವು. ನಂತರ ಆಕೆಯನ್ನು ಅಭಿಲಾಶ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಕುಡಿದ ಮತ್ತಿನಲ್ಲಿದ್ದ ಅಭಿಲಾಶ ರೆಸಿಡೆನ್ಸಿ ರಸ್ತೆಯ ಗುಡ್ ಶೆಫರ್ಡ್ ಸಭಾಂಗಣದ ಹತ್ತಿರ ಸಾಯಂಕಾಲ 7 ಗಂಟೆ ಸುಮಾರಿನಲ್ಲಿ ನಿಯಂತ್ರಣ ತಪ್ಪಿ ಮೂರು ಕಾರುಗಳ ಮೇಲೆ ತನ್ನ ಕಾರನ್ನು ಹರಿಸಿದ್ದಾರೆ.

ಹಾನಿಗೀಡಾದ ಕಾರುಗಳ ಚಾಲಕರು ಅಭಿಲಾಶ ಮತ್ತು ಆಕೆಯ ಸ್ನೇಹಿತೆಯರ ಮೇಲೆ ಹಲ್ಲೆ ನಡೆಸಿದ್ದಾರೆ. ಆಗ ಅಭಿಲಾಶಳ ಮತ್ತಿಬ್ಬರು ಸ್ನೇಹಿತೆಯರು ಕಾರಿನಿಂದಿಳಿದು ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಅಶೋಕನಗರ ಪೊಲೀಸರು ಅಭಿಲಾಶರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ರಕ್ತದಲ್ಲಿ ಆಲ್ಕೋಹಾಲ್ ಪ್ರಮಾಣ ಅನುಮತಿ ಮಟ್ಟಕ್ಕಿಂತ ಹೆಚ್ಚು ಅಂದರೆ 140 ಮಿಲಿ ಗ್ರಾಂನಷ್ಟಿತ್ತು.

ಹಾನಿಗೀಡಾದ ಕಾರಿನ ಚಾಲಕರು ಅಭಿಲಾಶರ ವಿರುದ್ಧ ಕುಡಿದು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದ ಕೇಸು ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅಭಿಲಾಶ ಮತ್ತು ಆಕೆಯ ಸ್ನೇಹಿತೆಯರು ಅವರ ಮೇಲೆ ಹಲ್ಲೆ ಕೇಸನ್ನು ದಾಖಲಿಸಿದ್ದಾರೆ.

ಅಭಿಲಾಶ ಮತ್ತು ಆಕೆಯ ಸ್ನೇಹಿತೆಯರನ್ನು ಬೌರಿಂಗ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದು ಅಲ್ಲಿ ಚಿಕಿತ್ಸೆ ನೀಡಿ ನಂತರ ಅವರ ಸಂಬಂಧಿಕರ ಮನೆಗೆ ಕಳುಹಿಸಲಾಯಿತು. ಅವರಿಗೆ ಸೋಮವಾರ ಪೊಲೀಸ್ ಠಾಣೆಗೆ ಬಂದು ಹೇಳಿಕೆಗಳನ್ನು ಮತ್ತೆ ದಾಖಲಿಸುವಂತೆ ಸೂಚಿಸಿದ್ದೇವೆ. ಅಭಿಲಾಶ ತಮ್ಮ ಡ್ರೈವಿಂಗ್ ಲೈಸನ್ಸ್ ನ್ನು ನೀಡಿಲ್ಲ. ಅವರಲ್ಲಿ ಡ್ರೈವಿಂಗ್ ಲೈಸೆನ್ಸ್ ಇದೆಯೇ ಇಲ್ಲವೇ ಎಂಬ ಬಗ್ಗೆ ಸಂಶಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.  
ಅಭಿಲಾಶ ವಿಮಾನಯಾನ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಹಿಮಾಂಶು ಕರ್ನಾಟಕ ಬಾಸ್ಕೆಟ್ ಬಾಲ್ ಸಂಸ್ಥೆಯಲ್ಲಿ ವ್ಯವಸ್ಥಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com