ಮರೀಗೌಡ ಸಂಬಂಧಿಗೆ ಸೇರಿದ ಬಾರ್ ಲೈಸೆನ್ಸ್ ರದ್ದು ಮಾಡಿದ್ದ ಮೈಸೂರು ಡಿಸಿ

ಘಟನೆಗೂ ಕೆಲ ದಿನಗಳ ಹಿಂದೆ ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರು ಮರೀಗೌಡ ಅವರ ಸಂಬಂಧಿಗೆ ಸೇರಿದೆ ಎನ್ನಲಾಗಿದ್ದ ಬಾರ್ ಲೈಸೆನ್ಸ್ ವೊಂದನ್ನು ರದ್ದು ಮಾಡಿದ್ದರು...
ಮುಖ್ಯಮಂತ್ರಿ ಆಪ್ತ ಮರೀಗೌಡ ಹಾಗೂ ಜಿಲ್ಲಾಧಿಕಾರಿ ಸಿ. ಶಿಖಾ (ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಆಪ್ತ ಮರೀಗೌಡ ಹಾಗೂ ಜಿಲ್ಲಾಧಿಕಾರಿ ಸಿ. ಶಿಖಾ (ಸಂಗ್ರಹ ಚಿತ್ರ)
Updated on

ಮೈಸೂರು: ಘಟನೆಗೂ ಕೆಲ ದಿನಗಳ ಹಿಂದೆ ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರು ಮರೀಗೌಡ ಅವರ ಸಂಬಂಧಿಗೆ ಸೇರಿದೆ ಎನ್ನಲಾಗಿದ್ದ ಬಾರ್ ಲೈಸೆನ್ಸ್ ವೊಂದನ್ನು ರದ್ದು ಮಾಡಿದ್ದರು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.

ಮೈಸೂರು-ಮಾನಂದವಾಡಿ ರಸ್ತೆಯಲ್ಲಿರುವ ಚಿತ್ರವನ ರೆಸಾರ್ಟ್ ಗೆ ನೀಡಿದ್ದ ಬಾರ್ ಲೈಸೆನ್ಸ್ ನ್ನು ನವೀಕರಿಸಲು ಅವಕಾಶ ನೀಡದ ಶಿಖಾ ಅವರು ಲೈಸನ್ಸ್ ನ್ನು ರದ್ದುಗೊಳಿಸಿದ್ದರು. ಈ ಕಾರಣದಿಂದಲೇ ಮರೀಗೌಡ ಅವರು ಜಿಲ್ಲಾಧಿಕಾರಿಯ ವಿರುದ್ಧ ಸಿಡಿದೆದ್ದಿದ್ದರು ಎಂದು ತಿಳಿದುಬಂದಿದೆ.

ಮೈಸೂರು-ಮಾನಂದವಾಡಿ ರಸ್ತೆಯಲ್ಲಿರುವ ಚಿತ್ರವನ ರೆಸಾರ್ಟ್ ರಾಜ್ಯ ಹೆದ್ದಾರಿಯ ಸಮೀಪದಲ್ಲಿ. ಅಬಕಾರಿ ಕಾಯ್ದೆ ನಿಯಮದ ಪ್ರಕಾರ ರೆಸಾರ್ಟ್ ಗಳು ಹೆದ್ದಾರಿಯಿಂದ 220 ಮೀಗಳಿಂದ ದೂರ ಇರಬೇಕು. ಆದರೆ, ಈ ರೆಸಾರ್ಟ್ ರಾಜ್ಯ ಹೆದ್ದಾರಿ ಸಮೀಪದಿಂದ 30 ಮೀ ವ್ಯಾಪ್ತಿಯಲ್ಲಿದ್ದ ಕಾರಣ ಸಿವಿಲ್-7 ಲೈಸೆನ್ಸ್ ನೀಡಲು ಅವಕಾಶ ಇರಲಿಲ್ಲ. ಹೀಗಿದ್ದರೂ ನಿಯಮ ಮೀರಿ ಲೈಸೆನ್ಸ್ ನ್ನು ಪಡೆದು ರೆಸಾರ್ಟ್ ನಡೆಸಲಾಗುತ್ತಿತ್ತು.

ಇದರಂತೆ 2016-17ನೇ ಸಾಲಿಗೆ ಲೈಸೆನ್ಸ್ ನವೀಕರಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಈ ಬಗ್ಗೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಮರೀಗೌಡ ಅವರು ಲೈಸೆನ್ಸ್ ಮಾಡಿಕೊಂಡುವಂತೆ ಅಧಿಕಾರಿಗಳಿಗೆ ಒತ್ತಡ ಹೇರಿದ್ದರು ಎಂದು ತಿಳಿದುಬಂದಿದೆ.

ಮರೀಗೌಡ ಅವರ ಒತ್ತಡಕ್ಕೆ ಮಣಿಯದ ಜಿಲ್ಲಾಧಿಕಾರಿ ಶಿಖಾ ಅವರು ಲೈಸೆನ್ಸ್ ನವೀಕರಣ ಮಾಡದೆ ಸಿವಿಲ್-7 ರದ್ದು ಪಡಿಸಿ ಆದೇಶ ಹೊರಡಿಸಿದ್ದರು. ಇದಕ್ಕೆ ತೀವ್ರ ಕೆಂಡಾಮಂಡಲಗೊಂಡಿದ್ದ ಮರೀಗೌಡ ಅವರು, ತಹಸೀಲ್ದಾರ್ ನ್ನು ಬಿಡುಗಡೆ ಮಾಡುತ್ತಿಲ್ಲ ಎಂಬ ನೆಪ ಇಟ್ಟುಕೊಂಡು ಜಿಲ್ಲಾಧಿಕಾರಿಗಳ ವಿರುದ್ಧ ಏಕವಚನದಲ್ಲಿ ನಿಂದಿಸಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

ಮುಖ್ಯಮಂತ್ರಿ ಆಪ್ತ ಗೆಳೆಯನೆಂಬ ಅಸ್ತ್ರವನ್ನು ಬಳಸಿಕೊಂಡು ಮರೀಗೌಡ ನಡೆಸುತ್ತಿರುವ ಅಕ್ರಮಗಳು ಇದೀಗ ಒಂದೊಂದಾಗಿ ಬೆಳಕಿಗೆ ಬರುತ್ತಿದೆ.

ಚಾಮುಂಡೇಶ್ವರಿ ಕ್ಷೇತ್ರದ ಶಾಸತ ಜಿ.ಟಿ. ದೇವೇಗೌಡ ಕೂಡ ಮರೀಗೌಡ ಕೆಲ ಆರೋಪಗಳನ್ನು ಈ ಹಿಂದೆ ವ್ಯಕ್ತಪಡಿಸಿದ್ದರು. ರಾಜ್ಯ ಅಭಿವೃದ್ಧಿ ಕಾರ್ಯಗಳಲ್ಲಿ ಮರೀಗೌಡ ಅವರು ಮಧ್ಯಸ್ಥಿಕೆ ವಹಿಸುತ್ತಿದ್ದು, ಭೂಮಿ ಪೂಜೆಗಳಲ್ಲಿ ಭಾಗಿಯಾಗುತ್ತಿದ್ದಾರೆಂದು ಹೇಳಿಕೊಂಡಿದ್ದರು.

ತಮ್ಮ ಕ್ಷೇತ್ರದ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ಹಾಗೂ ಹಲವು ಪ್ರದೇಶಗಳಲ್ಲಿ ಮರೀಗೌಡ ಅವರು ಭೂಮಿ ಪೂಜೆ ಮಾಡುತ್ತಿದ್ದು, ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೋಟಿಗಟ್ಟಲೆ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಾನೇ ಶಾಸಕನೆಂಬಂತೆ ಮರೀಗೌಡ ಅವರು ವರ್ತಿಸುತ್ತಿದ್ದಾರೆಂದು ಸುದ್ದಿಗೋಷ್ಠಿಯೊಂದರಲ್ಲಿ ದೇವೇಗೌಡ ಅವರು ಹೇಳಿಕೊಂಡಿದ್ದರು.

ಇದಲ್ಲದೆ, ಮರೀಗೌಡ ಅವರು, 32 ವರ್ಷಗಳ ಹಿಂದೆ ತಮ್ಮ ಮಾತನ್ನು ಕೇಳದ ಕಾರಣ ಮೈಸೂರು ತಾಲೂಕಿನ 8 ಕಾರ್ಯನಿರ್ವಾಹಕ ಅಧಿಕಾರಿಗಳನ್ನು ತಮ್ಮ ಪ್ರಭಾವದಿಂದ ವರ್ಗಾವಣೆ ಮಾಡಿದ್ದಾರೆಂದು ಆರೋಪಿಸಿದ್ದರು. ಅಲ್ಲದೆ, ತಮ್ಮದೇ ಅಧಿಕಾರ ನಡೆಯುವ ಸಲುವಾಗಿ ಪೊಲೀಸ್ ಅಧಿಕಾರಿಗಳು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಸೇರಿಸಿ ತಮ್ಮ ನಿವಾಸದಲ್ಲಿ ಅಕ್ರಮವಾಗಿ ಸಭೆಯೊಂದನ್ನು ಏರ್ಪಡಿಸಿ ಮಾತುಕತೆ ನಡೆಸಿದ್ದಾರೆಂದು ಹೇಳಿಕೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com