
ಬೆಂಗಳೂರು: ಮಹಿಳೆಯೊಬ್ಬರ ಕ್ರೂರ ವರ್ತನೆಗೆ ತನ್ನ 8 ಮಕ್ಕಳನ್ನು ಕಳೆದುಕೊಂಡಿದ್ದ ತಾಯಿ ನಾಯಿಯೊಂದು ಇದೀಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.
ತನ್ನ ಮರಿಗಳನ್ನು ಕಳೆದುಕೊಂಡ ಎರಡೂವರೆ ವರ್ಷದ ಅಮ್ಮು ಎಂಬ ನಾಯಿ ಸ್ಥಿತಿ ಇದೀಗ ಚಿಂತಾಜನಕವಾಗಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ತಾಯಿ ನಾಯಿಗೆ ಬುದ್ಧಿ ಕಲಿಸುವ ಸಲುವಾಗಿ ಪೀಣ್ಯದ ಕೃಷ್ಣನಗರದ ಮಹಿಳೆಯೊಬ್ಬರು ನಾಯಿಯ 8 ಮರಿ ನಾಯಿಗಳನ್ನು ಹತ್ಯೆ ಮಾಡಿದ್ದರು.
ಇದೀಗ ಮರಿ ಕಳೆದುಕೊಂಡ ದುಃಖದಲ್ಲಿರುವ ಅಮ್ಮು ನಾಯಿ, ಹಲವು ದಿನಗಳಿಂದಲೂ ಆಹಾರ ಸೇವಿಸುತ್ತಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಘಟನೆ ನಡೆದ ನಂತರ ಸ್ಥಳೀಯರಾಗಿರುವ ನಿಶಾಂತ್ ಎಂಬುವವರು ನಾಯಿಯ ರಕ್ಷಣೆ ಮಾಡುತ್ತಿದ್ದು, ಅಮ್ಮು ಹಲವು ದಿನಗಳಿಂದಲೂ ಆಹಾರ ಸೇವಿಸುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದೀಗ ಅಮ್ಮುವಿನ ಪರಿಸ್ಥಿತಿ ಚಿಂತಾಜನಕವಾಗಿದ್ದು, ಕ್ವೀನ್ಸ್ ರಸ್ತೆಯಲ್ಲಿ ಸೇವಾಭಾವಿ ಸಂಸ್ಥೆ ನಡೆಸುತ್ತಿರುವ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅಮ್ಮು ಸಾಂಕ್ರಾಮಿಕ ರೋಗ ಹಾಗೂ ಮಾನಸಿಕ ನೋವಿನಿಂದ ನರಳುತ್ತಿದೆ. ಹೀಗಾಗಿ ಅನಾರೋಗ್ಯ ಎದುರಾಗಿದೆ. ಅಮ್ಮು ಆರೋಗ್ಯ ಕುರಿತು ಕೃಷ್ಣನಗರದ ಹಲವು ನಿವಾಸಿಗಳು ಕರೆ ಮಾಡಿ ವಿಚಾರಿಸುತ್ತಿದ್ದಾರೆ ಎಂದು ವಿನಯ್ ಮೊರಾಯ್ ಅವರು ಹೇಳಿದ್ದಾರೆ.
ಏನಿದು ಘಟನೆ?
ಪೀಣ್ಯದ ಕೃಷ್ಣರಾಜನಗರದ ಮನೆಯ ಮುಂದೆ ಇದ್ದ ಚರಂಡಿಯೊಂದರಲ್ಲಿ ಬೀದಿ ನಾಯಿಯೊಂದು ಎಂಟು ಮರಿಗಳಿಗೆ ಜನ್ಮ ನೀಡಿತ್ತು. ನಾಯಿ ಮರಿಗಳಿಗೆ 15 ದಿನಗಳಾಗಿತ್ತು. ಆದರೆ, ತಾಯಿ ನಾಯಿ ಮೇಲೆ ಕೋಪಗೊಂಡಿದ್ದ ಮಾಜಿ ಸೈನಿಕರ ಪತ್ನಿ ಪೊನ್ನಮ್ಮ ಎಂಬುವವರು ಮಾರ್ಚ್ 15 ರಂದು ಮಳೆ ಸುರಿಯುತ್ತಿದ್ದ ವೇಳೆ ಮರಿಗಳನ್ನು ಎತ್ತಿ ರಸ್ತೆಗೆ ಬಿಸಾಡಿದ್ದಾರೆ.
ಇದರಿಂದಾಗಿ ಎಲ್ಲಾ ಮರಿಗಳು ಮೃತಪಟ್ಟಿದ್ದವು. ಮಹಿಳೆಯ ವರ್ತನೆ ವಿರೋಧಿಸಿ ಸ್ವಯಂ ಸೇವಾ ಸಂಸ್ಥೆಯೊಂದು ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಪೊನ್ನಮ್ಮ ಅವರನ್ನು ಬಂಧನಕ್ಕೊಳಪಡಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಅವರನ್ನು ಬಿಡುಗಡೆಗೊಳಿಸಲಾಗಿತ್ತು.
Advertisement