
ಬೆಂಗಳೂರು: ಆತ್ಮಹತ್ಯೆ ಮುನ್ನ ಡಿವೈಎಸ್ಪಿ ಎಂ.ಕೆ. ಗಣಪತಿ ನೀಡಿದ್ದ ಸಂದರ್ಶವನ್ನು ಪರಿಗಣಿಸಿ ಪೊಲೀಸರು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಚಿವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಬೇಕೆಂದು ಹಿರಿಯ ವಕೀಲರೊಬ್ಬರು ಶುಕ್ರವಾರ ಹೇಳಿದ್ದಾರೆ.
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಆತ್ಮಹತ್ಯೆಗೂ ಮುನ್ನ ಗಣಪತಿಯವರು ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ್ನು ನೀಡಿದ್ದಾರೆ. ಸಂದರ್ಶನದಲ್ಲಿ ತಮಗೆ ಏನಾದರೂ ಆದರೆ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್, ಅಡಿಜಿಪಿ ಎ.ಎಂ ಪ್ರಸಾದ್ ಹಾಗೂ ಲೋಕಾಯುಕ್ತ ಐಜಿಪಿ ಪ್ರಣಬ್ ಮೊಹಾಂತ್ ಯವರೇ ಕಾರಣರಾಗಿರುತ್ತಾರೆಂದು ಹೇಳಿಕೊಂಡಿದ್ದಾರೆ. ಸಂದರ್ಶವನ್ನು ಪರಿಗಣಿಸಿ ಪೊಲೀಸರು ಅಧಿಕಾರಿಗಳ ವಿರುದ್ಧ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಕಾರಣ)ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಬೇಕೆಂದು ಹೇಳಿದ್ದಾರೆ.
ಆರೋಪಗಳು ಸಾಬೀತಾಗದಿದ್ದ ಪಕ್ಷದಲ್ಲಿ ಪೊಲೀಸರು ಬಿ ವರದಿಯನ್ನು ತಯಾರಿಸಬೇಕು ಅಥವಾ ಆರೋಪ ಸಾಬೀತಾದರೆ ಚಾರ್ಜ್ ಶೀಠ್ ದಾಖಲಿಸಬೇಕು. ಆದರೆ, ಸರ್ಕಾರ ಆರೋಪಿಗಳ ಹೆಸರನ್ನು ಹೆಸರಿಸದೆಯೇ ಸಿಐಡಿ ತನಿಖೆಗೆ ನೀಡುವ ಮುಖಾಂತರ ಪ್ರಕರಣದಲ್ಲಿ ಕೈತೊಳೆದುಕೊಳ್ಳುವ ಯತ್ನ ನಡೆಸುತ್ತಿದೆ. ಒಬ್ಬ ಸಾಮಾನ್ಯ ವ್ಯಕ್ತಿ ಸತ್ತರೆ ಪೊಲೀಸರು ಇದೇ ರೀತಿಯ ನಿಯಮವನ್ನು ಅನುಸರಿಸುವರೇ? ಎಫ್ಐಆರ್ ನಲ್ಲಿ ದಾಖಲಿಸಲಾದ ಎಲ್ಲಾ ವ್ಯಕ್ತಿಗಳನ್ನು ಬಂಧಿಸುತ್ತಾರೆ.
ಸಾರ್ವಜನಿಕರ ನೆನಪಿನ ಶಕ್ತಿ ಬಹಳ ಕಡಿಮೆಯಿದ್ದು, ಆ ಸಮಯಕ್ಕೆ ತಕ್ಕಂತೆ ಅಷ್ಟೇ ಘಟನೆಗಳು ಸದ್ದು ಮಾಡುತ್ತವೆ. ಒಳ್ಳೆಯ ವ್ಯಕ್ತಿಗಳಿಗೆ ಸಮಾಜದಲ್ಲಿ ಗೌರವವಿಲ್ಲ. ಸರ್ಕಾರ ಇದೀಗ ಎಡವಟ್ಟಾದ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಹೇಳಿದ್ದಾರೆ.
ಡಿವೈಎಸ್ಪಿ ಕಲ್ಲಪ್ಪ ಆತ್ಮಹತ್ಯೆ ಮಾಡಿಕೊಂಡ ಕೂಡಲೇ ಪೊಲೀಸರು ಎಫ್ಐಆರ್ ಶೀಘ್ರಗತಿಯಲ್ಲಿ ದಾಖಲು ಮಾಡಿಕೊಂಡಿದ್ದರು. ಇದಕ್ಕೆ ಕಾರಣವೇನು ಪ್ರಕರಣದಲ್ಲಿ ಯಾವುದೇ ಹಿರಿಯ ವ್ಯಕ್ತಿಗಳ ಕೈವಾಡವಿರಲಿಲ್ಲ ಎಂಬುದು. ಕಲ್ಲಪ್ಪ ಪ್ರಕರಣದಲ್ಲಿ ಅನುಸರಿಸಿದ ನೀತಿಯನ್ನು ಗಣಪತಿಯವರ ಪ್ರಕರಣದಲ್ಲಿ ಪೊಲೀಸರು ಅನುಸರಿಸುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಅಧಿಕಾರಿಗಳ ವಿರುದ್ಧವೇ ಗಂಭೀರ ಆರೋಪಗಳು ಕೇಳಿಬಂದಿರುವುದು. ಪ್ರಕರಣ ಸಂಬಂಧದ ತನಿಖೆಗೆ ಸರ್ಕಾರ ಕೂಡಲೇ ವಿಶೇಷ ತನಿಖಾ ತಂಡವನ್ನು ರಚಿಸುವ ಅಗತ್ಯವಿದೆ ಎಂದು ವಕೀಲರು ಹೇಳಿದ್ದಾರೆ.
Advertisement