ಸರ್ಕಾರದ ಹೇಳಿಕೆಯಿಂದ ಅವಮಾನವಾಗಿದೆ: ಗಣಪತಿ ಕುಟುಂಬ ಸದಸ್ಯರ ಅಸಮಾಧಾನ

ಮಂಗಳೂರು ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ವಿಚಾರವಾಗಿ ಮೃತ ಅಧಿಕಾರಿಯ ಕುಟುಂಬ ಸದಸ್ಯರು ಸುದ್ದಿಗೋಷ್ಠಿ ನಡೆಸಿದ್ದು, ಪ್ರಕರಣದಲ್ಲಿ ಸರ್ಕಾರ ನಡೆದುಕೊಂಡಿರುವ ರೀತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದನದಲ್ಲಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಪ್ರತಿಭಟನೆ
ಸದನದಲ್ಲಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಪ್ರತಿಭಟನೆ

ಕೊಡಗು: ಮಂಗಳೂರು ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ವಿಚಾರವಾಗಿ ಮೃತ ಅಧಿಕಾರಿಯ ಕುಟುಂಬ ಸದಸ್ಯರು ಸುದ್ದಿಗೋಷ್ಠಿ ನಡೆಸಿದ್ದು, ಪ್ರಕರಣದಲ್ಲಿ ಸರ್ಕಾರ ನಡೆದುಕೊಂಡಿರುವ ರೀತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಣಪತಿ ಅವರ ಆತ್ಮಹಹತ್ಯೆಗೆ ವೈಯಕ್ತಿಕ ಸಮಸ್ಯೆ ಎಂದು ಸರ್ಕಾರ ಸದನದಲ್ಲಿ ಹೇಳಿದ್ದು ನಮ್ಮ ಸೊಸೆ ಪಾವನ ಹಾಗೂ ಕುಟುಂಬಕ್ಕೆ ಅವಮಾನವಾಗಿದೆ ಎಂದು ಗಣಪತಿ ಅವರ ತಂದೆ ಕುಶಾಲಪ್ಪ ಹೇಳಿದ್ದಾರೆ. ಇನ್ನು ಸೊಸೆಯ ವಿರುದ್ಧವೇ ದೂರು ನೀಡಿದ್ದ ವರದಿಯನ್ನು ತಳ್ಳಿಹಾಕಿರುವ ಕುಶಾಲಪ್ಪ, "ಜು.7 ರಂದು ರಾತ್ರಿ ಸುಮಾರು 8:30 ಕ್ಕೆ ಕರೆ ಬಂದಿತ್ತು. ಆ ನಂತರ 9:30 ರ ವೇಳೆಗೆ ನಾನು ಗಣಪತಿ ಆತ್ಮಹತ್ಯೆ ಮಾಡಿಕೊಂಡ ಲಾಡ್ಜ್ ಗೆ ತೆರಳಿದೆ. ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ನನ್ನನ್ನು ಗಣಪತಿ ಆತ್ಮಹತ್ಯೆ ಮಾಡಿಕೊಂಡ ರೂಮ್ ನ ಪಕ್ಕದ ರೂಮ್ ನಲ್ಲಿ ಕುಳಿತುಕೊಳ್ಳುವಂತೆ ಸೂಚನೆ ನೀಡಿದ್ದರು". ಎಂದು ತಿಳಿಸಿದ್ದಾರೆ.

"ಆತ್ಮಹತ್ಯೆ ಮಾಡಿಕೊಂಡ ಸ್ಥಳಕ್ಕೆ ತೆರಳಿದಾಗ ಮೊದಲು ಗಣಪತಿ ಮೃತದೇಹವನ್ನು ತೋರಿಸಲಿಲ್ಲ, ಹೇಳಿಕೆ ನೀಡಿದ ನಂತರ ಮೃತದೇಹ ತೋರಿಸುವುದಾಗಿ ತಿಳಿಸಿದರು, ಆದರೆ ಹೇಳಿಕೆ ನೀಡಲು ನನ್ನಿಂದ ಸಾಧ್ಯವಾಗದ ಕಾರಣ ಅವರೇ ಹೇಳಿಕೆ ಬರೆದುಕೊಂಡು ನನ್ನಿಂದ ಸಹಿ ಹಾಕಿಸಿಕೊಂಡರು, ನಂತರ ಹೇಳಿಕೆಯನ್ನು ಓದಿ ಹೇಳಿದರಾದರೂ ನನಗೆ ಆ ಕ್ಷಣದಲ್ಲಿ ಏನು ಅರ್ಥವಾಗಲಿಲ್ಲ, ನಾನು ಪೊಲೀಸರಿಗೆ ಯಾವುದೇ ದೂರು ನೀಡಿಲ್ಲ ಎಂದು ಹೇಳಿದ್ದಾರೆ.

ಇನ್ನು ಗಣಪತಿ ಆತ್ಮಹತ್ಯೆ ಮಾಡಿಕೊಂಡ ರೂಮ್ ನಲ್ಲಿ ಒಂದು ಕಿ ಹಾಗೂ ಪೇಪರ್ ಇತ್ತು, ಬಹುಶಃ ಆ ಪೇಪರ್ ಡೆತ್ ನೋಟ್ ಇದ್ದಿರಬಹುದು, ಮಹಜರ್ ನಂತರವೂ ಅಲ್ಲಿದ್ದ ವಸ್ತುಗಳ ಬಗ್ಗೆ ನಮಗೆ ಏನೂ ತಿಳಿಸಲಿಲ್ಲ. ಆತ್ಮಹತ್ಯೆ ಮಾಡಿಕೊಂಡ ರೂಮ್ ನಲ್ಲಿ ಏನಿತ್ತು, ಏನಿಲ್ಲ ಎಂಬುದೂ ಸಹ ನಮಗೆ ತಿಳಿಯಲಿಲ್ಲ ಎಂದು ಗಣಪತಿ ತಂದೆ ಕುಶಾಲಪ್ಪ ಹೇಳಿದ್ದಾರೆ.  ಆತ್ಮಹತ್ಯೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಸದನದಲ್ಲಿ ನೀಡಿರುವ ಹೇಳಿಕೆಯಿಂದ ನಮಗೆ ಅವಮಾನವಾಗಿದೆ. ಸಿಐಡಿ ತನಿಖೆಯಿಂದ ನ್ಯಾಯ ಸಿಗುವ ವಿಶ್ವಾಸವಿಲ್ಲ ಆದ್ದರಿಂದ ಪ್ರಕರಣದ ತನಿಖೆಯನ್ನು ಸಿಬಿಐ ಗೆ ವಹಿಸಬೇಕು ಎಂದು ಡಿವೈಎಸ್ ಪಿ ಕುಟುಂಬ ಸದಸ್ಯರು ಆಗ್ರಹಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com