
ಮಂಗಳೂರು: ರಾಜ್ಯ ಅಧಿವೇಶನದಲ್ಲಿ ಕೋಲಾಹಲ ಸೃಷ್ಟಿಸಿದ್ದ ಮಂಗಳೂರು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಂಸತ್ತಿಗೂ ತೆಗೆದುಕೊಂಡು ಹೋಗಲು ಬಿಜೆಪಿ ಸದಸ್ಯರು ಗುರುವಾರ ನಿರ್ಧರಿಸಿದ್ದಾರೆ.
ಸಂಸತ್ತಿನಲ್ಲಿ ಮುಂಗಾರು ಅಧಿವೇಶನ ಇದೇ ಜು.18 ರಿಂದ ಆರಂಭವಾಗಲಿದ್ದು, ರಾಜ್ಯದಲ್ಲಾಗುತ್ತಿರು ಬೆಳವಣಿಗೆ ಹಾಗೂ ಡಿವೈಎಸ್ಪಿ ಆತ್ಮಹತ್ಯೆ ಪ್ರಕರಣಗಳನ್ನು ಪ್ರಸ್ತಾಪಿಸಲು ಬಿಜೆಪಿ ನಿರ್ಧರಿಸಿದೆ. ಈ ಸಂಬಂಧ ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್,ಯಡಿಯೂರಪ್ಪ ಅವರು ಕೇಂದ್ರ ಗೃಹ ಸಚಿವರೊಂದಿಗೆ ಮಾತುಕತೆಯನ್ನು ನಡೆಸಿದ್ದಾರೆಂದು ಹೇಳಲಾಗುತ್ತಿದೆ.
ಡಿವೈಎಸ್ಪಿ ಗಣಪತಿಯವರು ಆತ್ಮಹತ್ಯೆ ಪ್ರಕರಣವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಲು ಅನುಮತಿ ನೀಡಬೇಕೆಂದು ಲೋಕಸಭಾ ಸ್ಪೀಕರ್ ಬಳಿ ಮನವಿ ಮಾಡಿಕೊಳ್ಳಲಾಗುವುದು ಎಂದು ಉಡುಪಿ-ಚಿಕ್ಕಮಗಳೂರು ಶಾಸಕ ಶೋಭಾ ಕರಂದ್ಲಾಜೆಯವರು ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಶಾಸಕ ಅನಂತಕುಮಾರ್ ಹೆಗ್ಡೆ ಮಾತನಾಡಿ, ರಾಜ್ಯದಲ್ಲಿ ಸಂವಿಧಾನ ಬಿಕ್ಕಟ್ಟು ಎದುರಾಗಿದೆ. ರಾಜ್ಯ ಇಂದು ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಶಾಸಕಾಂಗ ಮತ್ತು ಕಾರ್ಯಕಾರಿಗಳು ನಡುವೆ ದೊಡ್ಡ ಕಂದಕದ ಸಮಸ್ಯೆಯೇ ಇದೆ. ಮೈಸೂರು ಜಿಲ್ಲಾಧಿಕಾರಿ ಸಿ. ಶಿಖಾ ಅವರಿಗೆ ಬೆದರಿಕೆ, ಇಬ್ಬರು ಡಿವೈಎಸ್ಪಿಗಳ ಆತ್ಮಹತ್ಯೆ ಪ್ರಕರಣಗಳು ರಾಜ್ಯ ಆಡಳಿತ ಹಾಳಾಗುವಂತೆ ಮಾಡುತ್ತಿದೆ. ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ದೊಡ್ಡ ಅವ್ಯವಸ್ಥೆಯೇ ಸೃಷ್ಟಿಯಾಗಿರುವುದು ಇದರಿಂದ ತಿಳಿದುಬರುತ್ತಿದೆ ಎಂದು ಹೇಳಿದ್ದಾರೆ.
ಮಾಜಿ ಹೈಕೋರ್ಟ್ ನ್ಯಾಯಾಧೀಶ ಎಂ ಎಫ್ ಸಲ್ದಾನಾ ಮಾತನಾಡಿ, ಶಾಸಕಾಂಗ ಹಾಗೂ ಕಾರ್ಯಕಾರಿಗಳ ನಡುವಿನ ಹಗ್ಗಜಗ್ಗಾಟಗಳು, ಮನಸ್ತಾಪಗಳು ಇಂದು ರಾಜ್ಯದಲ್ಲಿ ಈ ರೀತಿಯ ಪರಿಸ್ಥಿತಿ ಉಂಟಾಗಲು ಕಾರಣವಾಗಿದೆ. ಡಿವೈಎಸ್ಪಿಗಳು ಆತ್ಮಹತ್ಯೆ ಮಾಡಿಕೊಳ್ಳುವುದಿ ಸಾಮಾನ್ಯ ವಿಷಯವಲ್ಲ. ರಾಜಕಾರಣಿಗಳಿಂದ ಬೇಸತ್ತು, ಅವಮಾನದಿಂದ ಆತ್ಮಹತ್ಯೆಯಂತಹ ದುಸ್ಸಾಹಸಕ್ಕೆ ಕೈ ಹಾಕುತ್ತಿದ್ದಾರೆಂದು ಹೇಳಿದ್ದಾರೆ.
Advertisement