ವಾಣಿವಿಲಾಸ ಆಸ್ಪತ್ರೆ ನವಜಾತ ಶಿಶು ಅಪಹರಣ ಪ್ರಕರಣ: ತಾಯಿ ಮಡಿಲು ಸೇರಿದ ಕಂದಮ್ಮ

ವಾಣಿ ವಿಲಾಸ ಆಸ್ಪತ್ರೆಯಿಂದ ಅಪಹರಣವಾಗಿದ್ದ ನವಜಾತ ಶಿಶುವನ್ನು ಪೊಲೀಸರು ಪತ್ತೆ ಹಚ್ಚಿದ್ದು, ಸುರಕ್ಷಿತವಾಗಿ ತಾಯಿ ಮಡಿಲು ಸೇರಿಸಿದ್ದಾರೆ. ಈ ಸಂಬಂಧ ..
ತಾಯಿ ಮಡಿಲು ಸೇರಿದ ನವಜಾತ ಶಿಶು
ತಾಯಿ ಮಡಿಲು ಸೇರಿದ ನವಜಾತ ಶಿಶು

ಬೆಂಗಳೂರು: ವಾಣಿ ವಿಲಾಸ ಆಸ್ಪತ್ರೆಯಿಂದ ಅಪಹರಣವಾಗಿದ್ದ  ನವಜಾತ ಶಿಶುವನ್ನು ಪೊಲೀಸರು ಪತ್ತೆ ಹಚ್ಚಿದ್ದು, ಸುರಕ್ಷಿತವಾಗಿ ತಾಯಿ ಮಡಿಲು ಸೇರಿಸಿದ್ದಾರೆ. ಈ ಸಂಬಂಧ ಮಹಿಳೆಯೋರ್ವಳನ್ನು ಬಂಧಿಸಿದ್ದಾರೆ.

ಬಸವೇಶ್ವರನಗರದ ಭೋವಿ ಕಾಲೊನಿಯ ದೇವಿಬಾಯಿ ಎಂಬಾಕೆಯನ್ನು ಬಂಧಿಸಲಾಗಿದೆ. ಜುಲೈ 12ರಂದು ಆಸ್ಪತ್ರೆಗೆ ದಾಖಲಾಗಿದ್ದ ರಾಜಸ್ತಾನ ಮೂಲದ ರೇಖಾ  ಎಂಬುವರಿಗೆ ಜುಲೈ 13ರಂದು ಹೆಣ್ಣು ಮಗು ಜನಿಸಿತ್ತು. ರೇಖಾ ಅವರ ತಾಯಿ ಹೀನಾದೇವಿ, ಮಗುವನ್ನು ಎತ್ತಿಕೊಂಡು ಮಧ್ಯಾಹ್ನ ಆಸ್ಪತ್ರೆ ಆವರಣದ ಕಟ್ಟೆಯೊಂದರಲ್ಲಿ ಕುಳಿತಿದ್ದರು. ಈ ವೇಳೆ ದೇವಿಬಾಯಿ ಸಹ ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದಳು.
ಹೀನಾದೇವಿ ಅವರನ್ನು ಪರಿಚಯ ಮಾಡಿಕೊಂಡ ದೇವಿಬಾಯಿ, ಪೂರ್ವಾಪರ ವಿಚಾರಿಸಿದ್ದಳು. ಅವರ ಕೈಯಲ್ಲಿದ್ದ ಮಗುವನ್ನು ಎತ್ತಿಕೊಂಡು ಮುದ್ದಾಡಿದ್ದಳು. ಈ ವೇಳೆ  ಹೀನಾದೇವಿ, ಶೌಚಾಲಯಕ್ಕೆ ಹೋಗುತ್ತೇನೆ ಎಂದು ಹೇಳಿ ಮಗುವನ್ನು ಕೈಗೆ ಕೊಟ್ಟು ಹೋಗಿದ್ದರು. ಈ ವೇಳೆಗಾಗಲೇ ದೇವಿಬಾಯಿ ಮಗುವಿನ ಜೊತೆ ಆಸ್ಪತ್ರೆಯಿಂದ ಪರಾರಿಯಾಗಿದ್ದಳು.

ಬಸವೇಶ್ವರ ನಗರದ ಭೋವಿ ಕಾಲೊನಿಯಲ್ಲಿರುವ ತನ್ನ ಮನೆಗೆ ಶಿಶುವನ್ನು ಕರೆದೊಯ್ದಿದ್ದ ದೇವಿಬಾಯಿ, ಅದನ್ನು ಮಲಗಿಸಿದ್ದಳು.ಎಚ್ಚರವಾಗಿ ಅಳಲು ಆರಂಭಿಸಿತ್ತು. ಸ್ಶಳೀಯರೊಬ್ಬರು ಪೊಲೀಸರಿಗೆ ಮಾಹಿತಿ  ನೀಡಿದ್ದರು. ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಶಿಶುವನ್ನು ಅಪಹರಿಸಿ ತಂದಿದ್ದನ್ನು ದೇವಿಬಾಯಿ ಒಪ್ಪಿಕೊಂಡಿದ್ದಾಳೆ.

ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿಗೆ ಆರಂಭದಲ್ಲಿ  ಗಂಡು ಮಗು ಜನಿಸಿತ್ತು. ದೇವಿಬಾಯಿ, ಎರಡು ಬಾರಿ ಗರ್ಭ ಧರಿಸಿದರೂ  ಆರೋಗ್ಯ ಸಮಸ್ಯೆಯಿಂದಾಗಿ ಗರ್ಭಪಾತ ಆಗಿತ್ತು. ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದಕ್ಕಾಗಿ ಆಗಾಗ ವಾಣಿ ವಿಲಾಸ ಆಸ್ಪತ್ರೆಗೆ ಬಂದು ಹೋಗುತ್ತಿದ್ದಳ. ಹೆಣ್ಣು ಮಗು ಬೇಕು ಎಂಬ ಆಸೆ ಇತ್ತು. ಗರ್ಭಪಾತದಿಂದಾಗಿ ಆ ಆಸೆ ಈಡೇರಿರಲಿಲ್ಲ. ಹೀಗಾಗಿ ಆಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎಂದು ತನಿಖಾಧಿಕಾರಿಯ ತಿಳಿಸಿದ್ದಾರೆ. ಆರೋಪಿ ದೇವಿಬಾಯಿ ಈ ಹಿಂದೆ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com