ಮುಂದಿನ ಬೆಂಗಳೂರು ನಗರಾಭಿವೃದ್ಧಿ ಸಚಿವ ಯಾರು?

ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಕೆಜೆ ಜಾರ್ಜ್ ಅವರು ಡಿವೈಎಸ್ಪಿ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು...
ರಾಮಲಿಂಗಾ ರೆಡ್ಡಿನಾ ಅಥವಾ ಕೃಷ್ಣ ಭೈರೇಗೌಡ
ರಾಮಲಿಂಗಾ ರೆಡ್ಡಿನಾ ಅಥವಾ ಕೃಷ್ಣ ಭೈರೇಗೌಡ

ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಕೆಜೆ ಜಾರ್ಜ್ ಅವರು ಡಿವೈಎಸ್ಪಿ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಮುಂದಿನ ಬೆಂಗಳೂರು ನಗರಾಭಿವೃದ್ದಿ ಸಚಿವರು ಯಾರಾಗುತ್ತಾರೆಂಬ ಕುತೂಹಲ ಇದೀಗ ಗರಿಗೇದರಿದೆ.

2018ರ ವಿಧಾನಸಭೆ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಿದೆ. ಸದ್ಯ ಬೆಂಗಳೂರು ನಗರಾಭಿವೃದ್ಧಿ ಖಾತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಇಟ್ಟುಕೊಂಡಿದ್ದಾರೆ. ಉತ್ತಮ ಚಾರಿತ್ರ್ಯವಿರುವ ಶಾಸಕನಿಗೆ ಈ ಖಾತೆ ನೀಡಬೇಕು ಎಂಬ ಯೋಚನೆಯಲ್ಲಿದೆ ಕಾಂಗ್ರೆಸ್.

ಇನ್ನು ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅಥವಾ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ನೀಡಬೇಕು ಎಂಬ ಮಾತುಗಳು ಕೇಳಿಬಂದಿವೆ. ಈ ಇಬ್ಬರ ನಡುವೆ ತೀವ್ರ ಪೈಪೋಟಿ ಎದುರಾಗಿದ್ದು, ಯಾರಿಗೆ ಖಾತೆ ಲಭಿಸಲಿದೆ ಎಂಬುದು ಕಾದು ನೋಡಬೇಕಿದೆ.

ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಮಾಡು ಇಲ್ಲವೆ ಮಡಿ ಎಂಬಂತ ಪರಿಸ್ಥಿತಿ ತಲೆದೋರಿದೆ. ಇದರಿಂದಾಗಿ ಸಚ್ಛಾರಿತ್ರ್ಯ ಹೊಂದಿರುವ ಸಚಿವನಿಗೆ ಈ ಸ್ಥಾನ ನೀಡಲು ಕಾಂಗ್ರೆಸ್ ತೀರ್ಮಾನಿಸಿದೆ. ಅದರಂತೆ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಹೆಚ್ಚುವರಿಯಾಗಿ ಈ ಖಾತೆ ಸಿಗುವ ಸಾಧ್ಯತೆ ಹೆಚ್ಚಿದೆ. ಬೆಂಗಳೂರಿನಲ್ಲಿ ಒಕ್ಕಲಿಗ ಸಮುದಾಯದ ಮತಗಳು ನಿರ್ಣಾಯಕ ಮತಗಳಾಗಿರುವುದರಿಂದ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಕೃಷ್ಣ ಭೈರೇಗೌಡ ಅವರಿಗೆ ಈ ಖಾತೆ ನೀಡಿದರೆ ಸೂಕ್ತ ಎಂಬುದು ಹಿರಿಯ ಮುಖಂಡರ ಅಭಿಪ್ರಾಯವಾಗಿದೆ.

ಅಲ್ಲದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೃಷ್ಣ ಭೈರೇಗೌಡ ಅವರು ಬಿಜೆಪಿಯ ಅನಂತ್ ಕುಮಾರ್ ಅವರಿಗೆ ತೀವ್ರ ಪೈಪೋಟಿ ನೀಡಿದ್ದರು.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಹ ಈ ಖಾತೆಗೆ ಪರ್ಯಾಯ ಆಯ್ಕೆಯಾಗಿದ್ದಾರೆ. ಇನ್ನು ಜಾರ್ಜ್ ಗಿಂತ ಮೊದಲು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿರುವ ಅನುಭವ ರಾಮಲಿಂಗಾ ರೆಡ್ಡಿ ಅವರಿಗಿದ್ದು, ಕಾರ್ಪೋರೇಟ್ ಆಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ್ದ ಅವರು 6 ಭಾರಿ ಶಾಸಕರಾಗಿದ್ದು ಉತ್ತಮ ಕೆಲಸಗಳನ್ನು ನಿರ್ವಹಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com