
ಬೆಂಗಳೂರು: ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ಸಾವನ್ನಪ್ಪಿರುವ ಘಟನೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಬಳಿಯಿರುವ ಬ್ಯಾಟರಾಯನಪುರದ ಅಮೃತಹಳ್ಳಿ ಕರೆಯಲ್ಲಿ ಭಾನುವಾರ ನಡೆದಿದೆ.
ನಾಗೇಶ್ ಎಂಬುವವರ ಪುತ್ರರಾದ ನವೀನ್ (12), ರವಿ (11) ಹಾಗೂ ಮಾಧವರಾಜ್ ಪುತ್ರ ಆದಿತ್ಯರಾಜ್ (15) ಮೃತಪಟ್ಟ ಬಾಲಕರು. ಆಂಧ್ರಪ್ರದೇಶ ಮೂಲದವರಾಗಿದ್ದ ಎರಡೂ ಕುಟುಂಬಗಳು ಕಳೆದ ಕೆಲ ವರ್ಷಗಳಿಂದ ಅಮೃತಹಳ್ಳಿಯಲ್ಲಿ ನೆಲೆಯೂರಿದ್ದರು. ಮೃತ ಪಟ್ಟ ಬಾಲಕರು ಸ್ಥಳೀಯ ಶಾರದ ಶಾಲೆಯಲ್ಲಿ 7, 6, 8 ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಭಾನುವಾರ ರಜೆಯಿದ್ದ ಕಾರಣ ಬೆಳಿಗ್ಗೆಯಿಂದಲೂ ಮೂವರು ಬಾಲಕರು ಮನೆಯ ಸಮೀಪ ಆಟವಾಡುತ್ತಿದ್ದರು. ಮಧ್ಯಾಹ್ನ 2 ರ ಸುಮಾರಿಗೆ ಆಟವಾಡಿ ದಣಿದಿದ್ದ ಬಾಲಕರು ಕೆರೆಯಲ್ಲಿ ಈಜಾಡಲು ಹೋಗಿದ್ದಾರೆ. ಆದರೆ, ವಿಚಾರವನ್ನು ಯಾರಿಗೂ ಹೇಳದೆಯೇ ಅಮೃತಹಳ್ಳಿ ಕೆರೆಗೆ ಹೋಗಿದ್ದಾರೆ. ಮೂವರಿಗೂ ಈಜು ಬರದ ಕಾರಣ ಕೆರೆಯಲ್ಲಿಯೇ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಕೆರೆಯಲ್ಲಿ ಸಂಪೂರ್ಣ ನೀರಿಲ್ಲದ ಕಾರಣ 2 ತಿಂಗಳಿಂದ ಬಿಡಿಎ ಕೆರೆಯ ಅಭಿವೃದ್ಧಿ ಕಾಮಗಾರಿ ನಡೆಸುತ್ತಿದೆ. ಭಾನುವಾರ ರಜೆ ಇದ್ದ ಕಾರಣ ಕೆರೆಯ ಬಳಿ ಯಾರೊಬ್ಬರು ಕೆಲಸಗಾರರು ಇರಲಿಲ್ಲ. ಈಗಾಗಲೇ ಕೆರೆಯ ಕೆಲ ಭಾಗಗಳಲ್ಲಿ ಹೂಳೆತ್ತಿರುವುದರಿಂದೆ ಕೆರೆಯಲ್ಲಿ ಆಳವಾದ ಗುಂಡಿಗಳಿವೆ. ಇತ್ತೀಚೆಗೆ ಸುರಿದಿದ್ದ ಮಳೆಗೆ ಈ ಗುಂಡಿಯಲ್ಲಿ ನೀರು ತಂಬಿತ್ತು. ಸುಮಾರು 6 ಅಡಿ ಆಳದ ಗುಂಡಿಯಲ್ಲಿ ಬಾಲಕರು ಈಜಲು ಮುಂದಾಗಿ ಕೆಸರಿನಲ್ಲಿ ಕಾಲು ಸಿಲುಕಿ ಮುಳುಗಿ ಮೃತಪಟ್ಟಿರಬಹುದೆಂದು ಪೊಲೀಸರು ಹೇಳಿದ್ದಾರೆ.
5 ಬಾಲಕರನ್ನು ಕೆರೆಯ ಬಳಿ ಇದ್ದುದ್ದನ್ನು ನಾನು ನೋಡಿದ್ದೆ. ಈ ವೇಳೆ ಬಾಲಕರಿಗೆ ಬೈದು ಕೆರೆಯಿಂದ ದೂರ ಬಳಿಯಿಂದ ಹೋಗುವಂತೆ ತಿಳಿಸಿದ್ದೆ. ಈ ವೇಳೆ ಹೆದರಿದ್ದ ಇಬ್ಬರು ಬಾಲಕರು ಓಡಿಹೋಗಿದ್ದರು. ಮೂವರು ಮಾತ್ರ ಕಣ್ಣು ತಪ್ಪಿಸಿ ಅಲ್ಲಿಯೇ ಉಳಿದುಕೊಂಡು, ನಾನು ಹೋದ ಬಳಿಕ ಕೆರೆಗೆ ಇಳಿದಿದ್ದಾರೆಂದು ಪ್ರತ್ಯಕ್ಷದರ್ಶಿ ಗಣಪತಿ ಎಂಬುವವರು ಹೇಳಿದ್ದಾರೆ.
Advertisement