
ಬೆಂಗಳೂರು: ಬಳ್ಲಾರಿ ಜಿಲ್ಲೆಯ ಕೂಡ್ಗಿಗಿಯ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆ ಪ್ರಕರಣ ಮತ್ತೆ ವಿವಾದ ಸೃಷ್ಟಿಸಿದ್ದು, ಮಂಗಳವಾರ ಹೊಸ ತಿರುವು ಪಡೆದುಕೊಂಡಿದೆ.
ಈ ವೈಯಕ್ತಿಕ ಕಾರಣ ರಾಜೀನಾಮೆ ನೀಡುವುದಕ್ಕೂ ಮುನ್ನ ಕರ್ತವ್ಯಕ್ಕೆ ಸಂಬಂಧಿಸಿದ ಕಾರಣ ನೀಡಿ ರಾಜೀನಾಮೆ ಪತ್ರ ಸಲ್ಲಿಸಲು ಅನುಪಮಾ ಮುಂದುಗಿದ್ದರು ಎಂಬ ಸತ್ಯಾಂಶ ಇದೀಗ ಬೆಳಕಿಗೆ ಬಂದಿದೆ.
ವ್ಯವಸ್ಥೆ ವಿರುದ್ಧ ತಿರುಗಿ ಬಿದ್ದು ಡಿವೈಎಸ್ಪಿ ಹುದ್ದೆಗೆ ಅನುಪಮಾ ಅವರು ನೀಡಿದ್ದ ರಾಜೀನಾಮೆ ಪತ್ರವನ್ನು ಈ ಹಿಂದೆ ಸರ್ಕಾರ ಅಂಗೀಕರಿಸಿತ್ತು. ವೈಯಕ್ತಿಕ ಕಾರಣಗಳ ನಿಮಿತ್ತ ಈ ಇಲಾಖೆಯಲ್ಲಿ ನನಗೆ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದ ಕಾರಣ ನಾನು ನನ್ನ ಹುದ್ದೆಗೆ ರಾಜೀನಾಮೆಯನ್ನು ನೀಡುತ್ತಿದ್ದೇನೆಂದು ಅನುಪಮಾ ಅವರು ಜೂ.4 ರಂದು ರಾಜೀನಾಮೆ ಸಲ್ಲಿಸಿದ್ದರು.
ಈ ಪತ್ರಕ್ಕೂ ಮುನ್ನ ಅನುಪಮಾ ಅವರು ಕರ್ತವ್ಯಕ್ಕೆ ಸಂಬಂಧಿಸಿಯೂ ಕೂಡ ರಾಜೀನಾಮೆ ಸಲ್ಲಿಸಿದ್ದರೆಂಬುದು ಇದೀಗ ತಿಳಿದುಬಂದಿದ್ದು, ಪತ್ರದಲ್ಲಿನ ಸಾರಾಂಶ ಈ ರೀತಿಯಿದೆ.
ನಾನು ಸತತವಾಗಿ ಅಕ್ರಮ ಮದ್ಯವನ್ನು ನಿರ್ಮೂಲನೆ ಮಾಡುವ ಬಗ್ಗೆ ನನ್ನ ಉಪ ವಿಭಾಗದಲ್ಲಿ ಕಟ್ಟಿನಿಟ್ಟಿನ ಕ್ರಮ ಜರುಗಿಸಿರುತ್ತೇನೆ. ಆದರೆ, ಕೂಡ್ಲಿಗಿಯಲ್ಲಿನ ಲಿಕ್ಕರ್ ಲಾಬಿ ಎಷ್ಟೊಂದು ಪ್ರಬಲವಾಗಿದೆ ಎಂದರೆ, ಕೂಡ್ಲಿಗಿ ಪೊಲೀಸ್ ಠಾಣೆ ಸಿಬ್ಬಂದಿ, ಪಿಎಸ್ಐ ಹಾಗೂ ಸಿಪಿಐಯವರು ಈ ಲಾಭಿಗೆ ತಲೆಬಾಗಿರುತ್ತಾರೆ.
ಈ ಲಿಕ್ಕರ್ ಲಾಬಿಯು ತೆರೆಮರೆಯಲ್ಲಿ ನಿಂತು ಈ ದಿನ ಕೂಡ್ಲಿಗಿಯ ಕೆಲವು ರಾಜಕೀಯ ಪ್ರಭಾವಿ ವ್ಯಕ್ತಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕುಮ್ಮಕ್ಕಿನಿಂದ ನನ್ನ ವಿರುದ್ಧ ಪ್ರತಿಭಟನೆ ಮಾಡಿರುತ್ತಾರೆ. ಇದಕ್ಕೆ ಪಿಎಸ್ ಐ ಹಾಗೂ ಸಿಪಿಐರವರ ಕುಮ್ಮಕ್ಕೂ ಇದೆ. ಸದರಿ ಪ್ರತಿಭಟನೆಯನ್ನು ತಡೆಯುವಲ್ಲಿ ನಾನು ಸಂಪೂರ್ಣ ನಿಷ್ಕ್ರಿಯಳಾಗಿರುತ್ತೇನೆ. ಈ ಬಗ್ಗೆ ಇಲಾಖೆಯ ಶಿಸ್ತು ಕ್ರಮಕ್ಕೂ ನಾನು ಬದ್ಧಳಾಗಿದ್ದೇನೆ.
ನಡೆದಿರುವ ಘಟನೆಗಳಿಂದ ನೊಂದು ನಾನು ರಾಜೀನಾಮೆಯನ್ನು ನೀಡಿರುತ್ತೇನೆಂದು ಪತ್ರದಲ್ಲಿ ಹೇಳಿಕೊಂಡಿದ್ದಾರೆ. ಇದೀಗ ಈ ಪತ್ರ ಬಹಿರಂಗಗೊಂಡಿದ್ದು, ರಾಜೀನಾಮೆ ಪತ್ರದ ಕುರಿತು ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ.
Advertisement