ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯನ ಬರ್ಬರ ಹತ್ಯೆ
ಧಾರವಾಡ: ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಕ್ಷೇತ್ರದ ಬಿಜೆಪಿ ಸದಸ್ಯರೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾದ ಯೋಗೇಶ್ ಗೌಡ (35) ಎಂದು ಗುರುತಿಸಲಾಗಿದ್ದು, ನಗರದ ಉದಯ್ ಜಿಮ್‌ನಲ್ಲಿ ಯೋಗೇಶ್ ಗೌಡ ಅವರು ವ್ಯಾಯಾಮ ಮಾಡುವಾಗ ಆಗಮಿಸಿದ ದುಷ್ಕರ್ಮಿಗಳು ಮಚ್ಚು ಲಾಂಗುಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹೆಬ್ಬಳ್ಳಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಯೋಗೇಶ ಗೌಡ ಅವರು ಜೈಲಿನಲ್ಲಿ ಇದ್ದುಕೊಂಡೇ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಭಾರಿ ಸುದ್ದಿಗೆ ಗ್ರಾಸವಾಗಿದ್ದರು.
ಪ್ರಕರಣ ದಾಖಲಿಸಿಕೊಂಡಿರುವ ಉಪನಗರ ಪೊಲೀಸ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದು, ಕೊಲೆಯಾದ ಜಿಮ್ ಸುತ್ತಮುತ್ತಲ ಪ್ರದೇಶವನ್ನು ಪರಿಶೀಲಿಸಿದ್ದಾರೆ. ಯೋಗೇಶ ಗೌಡ ಹತ್ಯೆಯಾದ ಜಿಮ್‌ನಲ್ಲಿ ಸಿಸಿಟಿವಿ ಇರಲಿಲ್ಲ ಎಂದು ತಿಳಿದುಬಂದಿದ್ದು, ಈ ಹಿಂದೆ ಎರಡು ಬಾರಿ ಸಿಸಿಟಿವಿ ಹಾಕಲು ಉದ್ದೇಶಿಸಲಾಗಿತ್ತು. ಎರಡು ದಿನದಲ್ಲಿ ಸಿಸಿಟಿವಿ ಅಳವಡಿಸುವ ಕಾರ್ಯ ಕೈಗೊಳ್ಳಬೇಕಿತ್ತು ಎಂದು ಜಿಮ್ ಮಾಲೀಕರು ತಿಳಿಸಿದ್ದಾರೆ.
ಜಿಮ್ ಹತ್ತಿರದ ಎರಡು ಪ್ರದೇಶಗಳಲ್ಲಿ ಸಿಸಿಟಿವಿ ಇದ್ದು ಅವುಗಳನ್ನು ಪೊಲೀಸರು ಪರಿಶೀಲಿಲನೆ ನಡೆಸಲು ತೀರ್ಮಾನಿಸಿದ್ದಾರೆ. ಧಾರವಾಡ ಉಪನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.ಈ ಹಿಂದೆ ಯೋಗೇಶ ಗೌಡ ಅವರು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಅರ್ಹರಲ್ಲ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಇದೇ ರೀತಿ ಯೋಗೇಶ ಗೌಡ ಅವರು ಸಹ ಪೊಲೀಸ್ ಇನ್ಸಪೆಕ್ಟರ್ ಒಬ್ಬರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಯೋಗೇಶ ಗೌಡ ಪರವಾಗಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಶಿ ಕೂಡ ಪ್ರತಿಭಟನೆ ನಡೆಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ