ವೈಭವೋಪೇತ ವಿವಾಹಕ್ಕೆ ಅರಮನೆ ಸಜ್ಜು: ಪ್ರಧಾನಿ ಮೋದಿ, ಸೋನಿಯಾಗೂ ಆಮಂತ್ರಣ

ವಿಶ್ವವಿಖ್ಯಾತ ಅರಮನೆಯಲ್ಲಿ ಜೂನ್ 25ರಿಂದ 29ರ ವರೆಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ವಿವಾಹ ಚಟುವಟಿಕೆಗಳು ಜರುಗಲಿವೆ.,
ಯದುವೀರ್ ಮತ್ತು ತ್ರಿಷಿಕಾ ಕುಮಾರಿ
ಯದುವೀರ್ ಮತ್ತು ತ್ರಿಷಿಕಾ ಕುಮಾರಿ

ಮೈಸೂರು: ವಿಶ್ವವಿಖ್ಯಾತ ಅರಮನೆಯಲ್ಲಿ ಜೂನ್ 25ರಿಂದ 29ರ ವರೆಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ವಿವಾಹ ಚಟುವಟಿಕೆಗಳು ಜರುಗಲಿವೆ.

ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಮತ್ತು ಪ್ರಮೋದಾದೇವಿ ದತ್ತುಪುತ್ರ ಯದುವೀರ್‌ ಅವರು ರಾಜಸ್ಥಾನದ ಡುಂಗುರಪುರದ ಹರ್ಷವರ್ಧನ್‌ ಸಿಂಗ್‌ ಮತ್ತು ಮಹೇಶ್ರೀಕುಮಾರಿ ಪುತ್ರಿ ತ್ರಿಷಿಕಾ ಕುಮಾರಿ ಅವರನ್ನು ವರಿಸಲಿದ್ದಾರೆ. ಜೂನ್‌ 27ರಂದು ಬೆಳಿಗ್ಗೆ 9.05ರಿಂದ 9.35ರ ವರೆಗೆ ಮುಹೂರ್ತ ನೆರವೇರಲಿದೆ.

ಯದುವಂಶ ರಾಜಮನೆತನದ ಸಂಪ್ರದಾಯದಂತೆ ವಿವಾಹ ಶಾಸ್ತ್ರಗಳು ನೆರವೇರಲಿವೆ. 25ರಂದು ನಸಕಿನ 4 ಗಂಟೆಗೆ ವರನ ಎಣ್ಣೆ ಸ್ನಾನದೊಂದಿಗೆ ವಿಧಿಗಳು ಮೊದಲ್ಗೊಳ್ಳುತ್ತವೆ. ನಂತರ ಕಂಕಣ ಧಾರಣೆ ನಡೆಯುತ್ತದೆ. ಬೆಳಿಗ್ಗೆ 8 ಗಂಟೆಗೆ ಕುಲಗುರು ಪರಕಾಲ ಮಠದ ಬ್ರಹ್ಮತಂತ್ರ ಸ್ವತಂತ್ರ ಸ್ವಾಮೀಜಿ ಪಾದಪೂಜೆ ನಡೆಯಲಿದೆ ಎಂದು ತಿಳಿಸಿದರು.

28ರಂದು ರಾತ್ರಿ 7.30ರಿಂದ 8.30ರ ವರೆಗೆ ದರ್ಬಾರ್‌ ಸಭಾಂಗಣದಲ್ಲಿ ಆರತಕ್ಷತೆ ಸಮಾರಂಭ ನಡೆಯಲಿದೆ. ಅರಮನೆ ಆವರಣದಲ್ಲಿ ಎಲ್‌ಇಡಿ ಪರದೆ ಅಳವಡಿಸಿ ಸಾರ್ವಜನಿಕರಿಗೆ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಕಲ್ಪಿಸುವ ಉದ್ದೇಶ ಇದೆ. ಇದಕ್ಕೆ ಪೋಲಿಸರಿಂದ ಅನುಮತಿ ನಿರೀಕ್ಷಿಸಲಾಗಿದೆ. 29ರಂದು ಸಂಜೆ ಅರಮನೆ ಆವರಣದಲ್ಲಿ ಕಾರಿನಲ್ಲಿ ನವದಂಪತಿ ಮೆರವಣಿಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಅರಮನೆ ಕಲ್ಯಾಣಮಂಟಪದಲ್ಲಿ ಸ್ಥಳಾವಕಾಶ ಕಡಿಮೆ ಇರುವುದರಿಂದ ಜೂ. 27ರಂದು ಮಹೂರ್ತ ಕಾರ್ಯದಲ್ಲಿ ಸುಮಾರು 550 ಮಂದಿಗೆ ಪಾಲ್ಗೊಳ್ಳಲು ವ್ಯವಸ್ಥೆ ಕಲ್ಪಿಸಲಾಗುವುದು. 29ರಂದು ಆರತಕ್ಷತೆಯಲ್ಲಿ ಸುಮಾರು 2 ಸಾವಿರ ಮಂದಿ ಭಾಗವಹಿಸಲು ವ್ಯವಸ್ಥೆ ಮಾಡಲಾಗುವುದು. ಆಹ್ವಾನಿತರಿಗೆ ಮಾತ್ರ ಪ್ರವೇಶ ಇರುತ್ತದೆ ಎಂದರು. ಸುಮಾರು 4 ಸಾವಿರ ಗಣ್ಯರು ಮದುವೆಗೆ ಹಾಜರಾಗಬಹುದೆಂದು ನಿರೀಕ್ಷಿಸಲಾಗಿದೆ.

ರಾಷ್ಟ್ರಪತಿ, ಪ್ರಧಾನಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಖ್ಯಮಂತ್ರಿ ಹಾಗೂ ಕೆಲ ಕೇಂದ್ರ ಸಚಿವರು, ಸೇರಿದಂತೆ ರಾಜ್ಯ ಸರ್ಕಾರದ ಎಲ್ಲ ಸಚಿವರು, ದೇಶದ ವಿವಿಧ ರಾಜಮನೆತನದವರು, ಫ್ರಾನ್ಸ್‌, ಜರ್ಮನಿ, ಸ್ವಿಟ್ಜರ್‌ಲ್ಯಾಂಡ್‌, ಅಮೆರಿಕ ಕಾನ್ಸುಲ್‌ ಆಫ್‌ ಜನರಲ್‌ ಮೊದಲಾದವರಿಗೆ ಆಮಂತ್ರಣ ನೀಡಲಾಗಿದೆ.

ಮಹಾರಾಜ ಯದುವೀರ್ ಮದುವೆ ಸಂಭ್ರಮಕ್ಕೆ ಕೇವಲ ಅರಮನೆ ಮಾತ್ರವಲ್ಲದೆ ಇಡೀ ಮೈಸೂರು ನಗರ ಸಜ್ಜಾಗುತ್ತಿದೆ. ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳ ಜನರು ತಮ್ಮ ಮನೆ ಮದುವೆ ಎಂಬಂತೆ ಸಂಭ್ರಮಿ ಸುತ್ತಿರುವುದು ವಿಶೇಷವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com