
ಚಾಮರಾಜನಗರ: ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್, ಅವರ ಪುತ್ರ ಎಚ್.ಎಂ.ಗಣೇಶ್‌ಪ್ರಸಾದ್ ವಿರುದ್ಧ ಅಕ್ರಮ ಗಣಿಗಾರಿಕೆ ಸಂಬಂಧ ನಗರದ ಭ್ರಷ್ಟಾಚಾರ ನಿಗ್ರಹ ದಳದಲ್ಲಿ (ಎಸಿಬಿ) ದೂರು ದಾಖಲಾಗಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಹೋಬಳಿ ಬೆಳಚಲವಾಡಿ ಗ್ರಾಮದ ಸರ್ವೇ ನಂ. 172, ಹಿರೀಕಾಟಿ ಸರ್ವೇ ನಂ. 108, ಕೋಟೆಕೆರೆ ಸರ್ವೇ ನಂ. 265, ಮಡಹಳ್ಳಿ ಸರ್ವೇ ನಂ. 192ರಲ್ಲಿ ಸಚಿವರು, ಅವರ ಪುತ್ರ ಮತ್ತು ಸಹೋದರ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಬಂಡೀಪುರ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿಯೇ ಗಣಿಗಾರಿಕೆ ನಡೆಯುತ್ತಿದೆ. ಸ್ಫೋಟಕ ಸಿಡಿಸುವ ಪರಿಣಾಮ ವನ್ಯಜೀವಿಗಳ ಬದುಕಿಗೆ ಕಂಟಕ ಎದುರಾಗಿದೆ ಎಂದು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎಲ್.ಸುರೇಶ್ ಅವರು ದೂರು ದಾಖಲಿಸಿದ್ದಾರೆ.
ಹಿರೀಕಾಟಿ, ಕೋಟೆಕೆರೆ, ಮಡಹಳ್ಳಿ, ಕೂತನೂರು, ಬೆಳಚಲವಾಡಿಯ ಗೋಮಾಳದಲ್ಲಿಯೂ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ. ಗಣಿ ದೂಳಿ ನಿಂದ ಜನರು ರೋಗಗಳಿಗೆ ತುತ್ತಾಗು ತ್ತಿದ್ದಾರೆ. ನೂರಾರು ಅಡಿ ಆಳದಲ್ಲಿ ಗಣಿಗಾರಿಕೆ ನಡೆಸುವ ಪರಿಣಾಮ ಈ ಭಾಗದಲ್ಲಿ ಅಂತರ್ಜಲ ಪ್ರಮಾಣ ಬತ್ತಿಹೋಗಿದೆ. ಜನರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಅರೇಪುರ ಗ್ರಾಮದ ಸರ್ವೇ ನಂ. 165ರ 3.25 ಎಕರೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. ಇದು ಬಂಡೀಪುರ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿದೆ. ಹಾಗಾಗಿ, ಜೀವವೈವಿಧ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಬೆಳಚಲವಾಡಿ ಸರ್ವೇ ನಂ. 172 ಮತ್ತು ಹಿರೀಕಾಟಿ ಸರ್ವೇ ನಂ. 108ರಲ್ಲಿ ಕಟ್ಟಡ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಈ ಪ್ರದೇಶ ಬಂಡೀಪುರದ ಪರಿಸರ ಸೂಕ್ಷ್ಮ ವಲಯದ ಡಿಲೈನ್‌ನಿಂದ 7.5 ಕಿ.ಮೀ. ಅಂತರದಲ್ಲಿದೆ. ಆದರೂ, ಜಿಲ್ಲಾಧಿಕಾರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಇಲಾಖೆಯು ಗಣಿಗಾರಿಕೆ ತಡೆಗೆ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಪ್ರದೇಶದ ವ್ಯಾಪ್ತಿಯ ಗ್ರಾಮಸ್ಥರು ಗಣಿ ದೂಳಿನಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಸಚಿವರ ಆಪ್ತರು, ಸಂಬಂಧಿಕರು ಮತ್ತು ಹಿಂಬಾಲಕರು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.
Advertisement