ಮೈಶುಗರ್ ಕಾರ್ಖಾನೆ ಪುನಾರಂಭಕ್ಕೆ ರೈತರಿಂದ ಸರ್ಕಾರದ ಮೇಲೆ ಒತ್ತಡ

ಸರ್ಕಾರಿ ಸ್ವಾಮ್ಯದ ಮೈಶುಗರ್ ಕಾರ್ಖಾನೆಯನ್ನು ಮುಚ್ಚಿ ಒಂದು ವರ್ಷವಾಗಿದೆ. ಏಪ್ರಿಲ್/ ಮೇ ತಿಂಗಳಲ್ಲಿ ಕಬ್ಬು ಅರೆಯುವ ಸೀಸನ್ ಪ್ರಾರಂಭವಾಗಲಿದ್ದು ಮಂಡ್ಯದ ಕಬ್ಬು ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ.
ಮೈಶುಗರ್ ಕಾರ್ಖಾನೆ
ಮೈಶುಗರ್ ಕಾರ್ಖಾನೆ

ಮಂಡ್ಯ: ಸರ್ಕಾರಿ ಸ್ವಾಮ್ಯದ ಮೈಶುಗರ್ ಕಾರ್ಖಾನೆಯನ್ನು ಮುಚ್ಚಿ ಒಂದು ವರ್ಷವಾಗಿದೆ. ಏಪ್ರಿಲ್/ ಮೇ ತಿಂಗಳಲ್ಲಿ ಕಬ್ಬು ಅರೆಯುವ ಸೀಸನ್ ಪ್ರಾರಂಭವಾಗಲಿದ್ದು ಮಂಡ್ಯದ ಕಬ್ಬು ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ.  
ಮೈಶುಗರ್ ಸಕ್ಕರೆ ಕಾರ್ಖಾನೆ ಮುಚ್ಚಿರುವುದರಿಂದ ಮಂಡ್ಯದ ಕಬ್ಬು ಬೆಳೆಗಾರರು ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ನಷ್ಟ ಉಂಟಾಗುತ್ತಿದ್ದು, ಶೀಘ್ರವೇ ಮೈಶುಗರ್ ಕಾರ್ಖಾನೆಯನ್ನು ಪುನಾರಂಭ ಮಾಡಬೇಕೆಂದು ಕಬ್ಬು ಬೆಳೆಗಾರರ ಸಂಘ ಸರ್ಕಾರದ ಮೇಲೆ ಒತ್ತಡ ಹೇರಲು ಯೋಜನೆ ರೂಪಿಸಿದೆ.
ಒಂದು ವರ್ಷವಾದರೂ ಸರ್ಕಾರ ಮೈಶುಗರ್ ಕಾರ್ಖಾನೆಯನ್ನು ಪ್ರಾರಂಭ ಮಾಡದೆ ಇರುವ ಹಿನ್ನೆಲೆಯಲ್ಲಿ ಶಾಶ್ವತವಾಗಿ ಮುಚ್ಚುವ ಅಥವಾ ಕಾರ್ಖಾನೆ ಖಾಸಗೀಕರಣಕ್ಕೆ ತುತ್ತಾಗುವ ಆತಂಕ ವ್ಯಕ್ತಪಡಿಸಿರುವ ರೈತರು, ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಶೀಘ್ರವೇ ಪುನಾರಂಭ ಮಾಡಬೇಕೆಂದು ಆಗ್ರಹಿಸಿ ಏ.18 ರಂದು ಬೃಹತ್ ರ್ಯಾಲಿ ಹಮ್ಮಿಕೊಂಡಿದ್ದಾರೆ.  ಇದೇ ವೇಳೆ ಮೈಶುಗರ್ ಕಾರ್ಖಾನೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಕಬ್ಬು ಬೆಳೆಗಾರರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನಿರಂತರ ಭರವಸೆಗಳ ನಡುವೆಯೂ ಮೈಶುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವುದಕ್ಕೆ ಜಿಲ್ಲಾಡಳಿತ ವಿಫಲವಾಗಿರುವುದರಿಂದ ರೈತರಿಗೆ ಆರ್ಥಿಕವಾಗಿ ನಷ್ಟ ಉಂಟಾಗಿದೆ.

ಮೈಶುಗರ್ ಕಾರ್ಖಾನೆ ಮುಚ್ಚಲ್ಪಟ್ಟಿರುವುದರಿಂದ ಕಬ್ಬು ಬೆಳೆಗಾರರು ಬೆಳೆದಿರುವ ಒಟ್ಟು 7 .75 ಲಕ್ಷ ಟನ್  ಪೈಕಿ ಅನಿವಾರ್ಯವಾಗಿ 3 ಲಕ್ಷ ಟನ್ ನಷ್ಟು ಕಬ್ಬನ್ನು ಖಾಸಗಿ ಕಾರ್ಖಾನೆಗಳಿಗೆ ಮಾರಾಟ ಮಾಡಬೇಕಾಗಿ ಬಂದಿದೆ. ಉಳಿದ ಕಬ್ಬನ್ನು ಪ್ರತಿ ಟನ್ ಗೆ 1 ,600 ರೂ ಬೆಲೆಗೆ ಸ್ಥಳಿಯ ಬೆಲ್ಲ ತಯಾರಿಕಾ ಘಟಕಗಳಿಗೆ ಮಾರಾಟ ಮಾಡಿದ್ದಾರೆ. ಖಾಸಗಿ ಕಾರ್ಖಾನೆಗಳಿಗೆ ಕಬ್ಬು ಮಾರಾಟ ಮಾಡುವುದರಿಂದ ಸಾಗಣೆ ದರವೂ ರೈತರ ಹೆಗಲಿಗೆ ಬೀಳುತ್ತದೆ, ಇದರಿಂದಾಗಿ ನಷ್ಟ ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ಮೈಶುಗರ್ ಕಾರ್ಖಾನೆಗೇ ಕಬ್ಬನ್ನು ಮಾರಾಟ ಮಾಡಿದ್ದರೆ  ಕಬ್ಬು ಬೆಳೆಗಾರರಿಗೆ ಲಾಭ ಉಂಟಾಗುತ್ತಿತ್ತು.
ಕಳೆದ 10 ತಿಂಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ 127 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಮೈಶುಗರ್ ಕಾರ್ಖಾನೆ ಪುನಾರಂಭ ಮಾಡದೇ ಇರಲು ಜಿಲ್ಲಾಡಳಿತ ವಿಫಲವಾಗಿರುವುದು ಸಹ ರೈತರ ಆತ್ಮಹತ್ಯೆ ಹಿಂದಿರುವ ಕಾರಣಗಳಲ್ಲಿ ಒಂದು ಎಂದು ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com