ಹಂಪಿ ಎಕ್ಸ್ ಪ್ರೆಸ್ ರೈಲಿನ ಮೇಲೆ ತುಂಡರಿಸಿ ಬಿದ್ದ ಹೈಟೆನ್ಷನ್ ವಿದ್ಯುತ್ ತಂತಿ!

ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್ ಪ್ರೆಸ್ ರೈಲಿನ ಮೇಲೆ ಹೈಟೆನ್ಷನ್ ವೈರ್ ತುಂಡರಿಸಿ ಬಿದ್ದ ಪರಿಣಾಮ ಆಗಬಹುದಾಗಿದ್ದ ಭಾರಿ ಅನಾಹುತ ಅದೃಷ್ಟವಶಾತ್ ತಪ್ಪಿದೆ...
ಹಂಪಿಎಕ್ಸ್ ಪ್ರೆಸ್ ರೈಲು (ಸಂಗ್ರಹ ಚಿತ್ರ)
ಹಂಪಿಎಕ್ಸ್ ಪ್ರೆಸ್ ರೈಲು (ಸಂಗ್ರಹ ಚಿತ್ರ)

ಮೈಸೂರು: ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್ ಪ್ರೆಸ್ ರೈಲಿನ ಮೇಲೆ ಹೈಟೆನ್ಷನ್ ವೈರ್ ತುಂಡರಿಸಿ ಬಿದ್ದ ಪರಿಣಾಮ ಆಗಬಹುದಾಗಿದ್ದ ಭಾರಿ ಅನಾಹುತ ಅದೃಷ್ಟವಶಾತ್ ತಪ್ಪಿದೆ.

ಈ ಮಾರ್ಗಕ್ಕೆ ಇಂಧನ ಇಲಾಖೆ ವಿದ್ಯುತ್ ಸಂಪರ್ಕ ನೀಡದ ಕಾರಣ ಆಗಬಹುದಾಗಿದ್ದ ಭಾರಿ ಅನಾಹುತ ತಬ್ಬಿದ್ದು, ಇದು ಕಿಡಿಗೇಡಿಗಳ ಕೃತ್ಯ ಎಂದು ಶಂಕಿಸಲಾಗುತ್ತಿದೆ. ರಾತ್ರಿ ಮೈಸೂರು ಬಿಟ್ಟಿದ್ದ ಹಂಪಿ ಎಕ್ಸ್‌ಪ್ರೆಸ್ ರೈಲು ರಾತ್ರಿ 7ಕ್ಕೆ ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿತ್ತು. ರೈಲು ರಾತ್ರಿ 7.45ಕ್ಕೆ ಕಲ್ಲಹಳ್ಳಿ ಸಮೀಪಿಸುತ್ತಿದ್ದಂತೆ ವಿದ್ಯುತ್ ತಂತಿ ತುಂಡಾಗಿ ರೈಲಿನ ಇಂಜಿನ್ ಮೇಲೆ ಬಿತ್ತು. ವಿದ್ಯುತ್ ತಂತಿ ರೈಲಿನ ಇಂಜಿನ್ ಬಳಿಯ ಚಕ್ರಕ್ಕೆ ಸುತ್ತಿಕೊಂಡು ಸ್ವಲ್ಪ ದೂರ ಚಲಿಸಿದ ಹಿನ್ನೆಲೆಯಲ್ಲಿ ವಿದ್ಯುತ್ ಕಂಬವೊಂದು ಉರುಳಿ ಬಿದ್ದಿದೆ. ಇದರಿಂದ ಭಾರಿ ಪ್ರಮಾಣದ ಶಬ್ಧ ಕೇಳಿ ಬಂದಿದೆ. ಅಲ್ಲದೆ, ಸುತ್ತಮುತ್ತಲ ಪ್ರದೇಶದಲ್ಲಿ ಸುಟ್ಟ ವಾಸನೆ ಹರಡಿತ್ತು. ಕೂಡಲೇ ಇದನ್ನು ಗಮನಿಸಿದ ಚಾಲಕ ರೈಲನ್ನು ನಿಲ್ಲಿಸಿದ್ದಾನೆ.

ವಿದ್ಯುತ್ ಕಂಬ ಬಿದ್ದ ಪರಿಣಾಮ ಉಂಟಾದ ಭಾರಿ ಶಬ್ಧ ಶಬ್ಧದಿಂದ ರೈಲಿನಲ್ಲಿದ್ದ ನೂರಾರು ಪ್ರಯಾಣಿಕರು ಆತಂಕಗೊಂಡು ರೈಲು ನಿಲುಗಡೆಯಾಗುತ್ತಿದ್ದಂತೆಯೇ ಕೆಳಗಿಳಿದಿದ್ದಾರೆ. ಬಳಿಕ ವಿದ್ಯುತ್ ತಂತಿ ರೈಲಿನ ಚಕ್ರಕ್ಕೆ ಸಿಲುಕಿಕೊಂಡಿರುವುದನ್ನು ಕಂಡು ಹೌಹಾರಿ ಸದ್ಯ ಪ್ರಾಣ ಉಳಿಯಿತು ಎಂದು ನಿಟ್ಟುಸಿರುಬಿಟ್ಟಿದ್ದಾರೆ.

ಅನಾಹುತ ತಪ್ಪಿಸಿದ ಚಾಲಕನ ಸಮಯಪ್ರಜ್ಞೆ
ಇನ್ನು ರೈಲು ಚಕ್ರಕ್ಕೆ ವಿದ್ಯುತ್ ತಂತಿ ಸುತ್ತಿಕೊಂಡರೂ ಅದೃಷ್ಟವಶಾತ್ ಯಾವುದೇ ದುರಂತ ಸಂಭವಿಸಿಲ್ಲ. ಅಪಾಯದ ಮುನ್ಸೂಚನೆ ಪಡೆದ ರೈಲು ಚಾಲಕ ಕೂಡಲೇ ರೈಲನ್ನು ನಿಲ್ಲಿಸಿದ್ದಾನೆ. ಹೀಗಾಗಿ ರೈಲು ಸ್ವಲ್ಪ ದೂರ ಚಲಿಸಿ ನಿಂತಿತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಮಂಡ್ಯ ಹಾಗೂ ಮೈಸೂರಿನ ತಾಂತ್ರಿಕ ತಂಡ ಮುರಿದು ಬಿದ್ದ ವಿದ್ಯುತ್ ಕಂಬ ತೆರವುಗೊಳಿಸಿ ವಿದ್ಯುತ್ ತಂತಿಯನ್ನು ಸರಿಪಡಿಸಿದರು.  ವಿದ್ಯುತ್ ತಂತಿ ತುಂಡರಿಸಿ ಬಿದ್ದ ಹಿನ್ನೆಲೆಯಲ್ಲಿ ಹಂಪಿ ಎಕ್ಸ್ಪ್ರೆಸ್ ಸೇರಿ ಮೂರು ರೈಲುಗಳ ಸಂಚಾರ ಒಂದೂವರೆ ತಾಸು ತಡವಾಯಿತು. ಹಂಪಿ ಎಕ್ಸ್ಪ್ರೆಸ್ ನಗರದ  ರೈಲ್ವೆ ನಿಲ್ದಾಣದಿಂದ 7 ಗಂಟೆಗೆ ಹೊರಟ ನಂತರ ಮೈಸೂರು-ಬೆಂಗಳೂರು ಪ್ಯಾಸೆಂಜರ್ ರೈಲು 7.10ಕ್ಕೆ ಹೊರಟಿತ್ತು. 8.30ಕ್ಕೆ ಕಾವೇರಿ ಎಕ್ಸ್ಪ್ರೆಸ್ ರೈಲು ನಿಲ್ದಾಣ ಬಿಟ್ಟಿತ್ತು.

ದುಷ್ಕರ್ಮಿಗಳ ಕೃತ್ಯ
ಎಲಿಯೂರು-ಮಂಡ್ಯದ ನಡುವೆ ಹಲವಾರು ಬಾರಿ ಚಲಿಸುವ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿವೆ. ಭಾನುವಾರ ರಾತ್ರಿ ರೈಲ್ವಿ ತಂತಿ ತುಂಡರಿಸಿ ಬಿದ್ದಿರುವುದು ಕೂಡ  ಕಿಡಿಗೇಡಿಗಳ ಕೃತ್ಯ ಎಂಬ ಶಂಕೆಯನ್ನು ರೈಲ್ವೆ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದ ಸಂದರ್ಭ ರೈಲ್ವೆ ತಂತಿಗಳನ್ನು ತುಂಡರಿಸಿರುವುದು ಕಂಡು ಬಂದಿದೆ.  ಇಲ್ಲಿನ ಚಹಾ ಮಾರುವವನ ಹೇಳಿಕೆ ಪ್ರಕಾರ ಈ ರೀತಿಯ ಘಟನೆಗಳು ಮೂರ‍್ನಾಲ್ಕು ಬಾರಿ ಜರುಗಿವೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com