
ಹಾಸನ: ನೀರಿನಲ್ಲಿ ಈಜಲು ಆಟ ಆಡಲು ಬರುವ ಪ್ರವಾಸಿಗರ ಪ್ರಾಣ ಬಲಿ ತೆಗೆದುಕೊಳ್ಳುತ್ತಿದೆ ಹೇಮಾವತಿ ಹಿನ್ನೀರು. ಈ ಸ್ಥಳದ ಬಗ್ಗೆ ಸರಿಯಾದ ಮಾಹಿತಿ ಇರದ ಕಾರಣ ಬಹುತೇಕ ಪ್ರವಾಸಿಗರೇ ತಮ್ಮ ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ.
ನಯನ ಮನೋಹರವಾದ ದೃಶ್ಯಾವಳಿಯನ್ನು ನೋಡಲು ಪ್ರವಾಸಿಗರು ಕೋಣಾಪುರ ದ್ವೀಪ ಮತ್ತು ಹೇಮಾವತಿ ಹಿನ್ನೀರಿಗೆ ಭೇಟಿ ನೀಡುತ್ತಾರೆ. ಕಳೆದ ಎರಡು ವರ್ಷಗಳಲ್ಲಿ ಸುಮಾರು 9 ಮಂದಿ ಹೇಮಾವತಿ ಹಿನ್ನೀರಿನಲ್ಲಿ ಪ್ರಾಣ ಕಳೆದು ಕೊಂಡಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆ ಪೋಷಕರ ಕಣ್ಮುಂದೆಯೇ ಆಟವಾಡುತ್ತಿದ್ದ ನಾಲ್ಕು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಇನ್ನು ರಾತ್ರಿಯಾಗುತ್ತಿದ್ದಂತೆ ಇಲ್ಲಿ ಹಲವು ಅನೈತಿಕ ಚಟುವಟಿಕೆಗಳು ಶುರವಾಗುತ್ತವೆ. ಇನ್ನು ಹಿನ್ನೀರಿನ ಹಲವು ಪ್ರದೇಶಗಳಲ್ಲಿ ಪ್ರವಾಸಿಗರು ಬಂದು ಮಧ್ಯ, ಮಾಂಸಾಹಾರ ಸೇವಿಸಿ ಬಾಟಲ್ ಹಾಗೂ ಹಲವು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಿಸಾಡುತ್ತಾರೆ.
ಕಳೆದ ಒಂದೂವರೆ ವರ್ಷದ ಹಿಂದೆ ಸಹ ಮೀನುಗಾರರ ಜೊತೆ ನಡೆದ ಜಗಳದಲ್ಲಿ ಇಬ್ಬರು ಮೀನುಗಾರರು ಇದೇ ಪ್ರದೇಶದಲ್ಲಿ ಕೊಲೆಯಾಗಿತ್ತು. ಇಬ್ಬರ ಶವಗಳನ್ನು ಪೊಲೀಸರು ಹೊರತೆಗೆದಿದ್ದರು.
ಹಿನ್ನೀರು ಪ್ರದೇಶದಲ್ಲಿ ಸರಿಯಾದ ಸೆಕ್ಯೂರಿಟಿ ಇಲ್ಲದಿರುವುದು ಹೆಚ್ಚಿನ ಸಾವು ನೋವುಗಳಾಗಲು ಕಾರಣವಾಗಿದೆ. ಜೊತೆಗೆ ಅನೈತಿಕ ಚಟುವಟಿಕೆಯ ತಾಣವಾಗಿದೆ.
ಹಲವು ಜನರು ಮನರಂಜನೆಗಾಗಿ ಹೇಮಾವತಿ ಹಿನ್ನೀರು ಪ್ರದೇಶಕ್ಕೆ ಬರುತ್ತಾರೆ. ಆದರೆ ಇಲ್ಲಿ ಅಪಾಯದ ಪ್ರದೇಶಗಳ ಕಡೆ ಹೋಗದಂತೆ ಮಾಹಿತಿ, ಎಚ್ಚರಿಕೆ ನೀಡುವವರು ಯಾರು ಇಲ್ಲ, ಹೀಗಾಗಿ ಒಬ್ಬ ಸೆಕ್ಯೂರಿಟಿ ಗಾರ್ಡ್ ನೇಮಿಸಬೇಕೆಂದು ಗೊರೂರಿನ ರೈತರೊಬ್ಬರು ಹೇಳುತ್ತಾರೆ.
Advertisement