ಶಿವಮೊಗ್ಗದಲ್ಲೊಂದು ವಿವಾದಾತ್ಮಕ ಯಾಗ, ಸೋಮಯಾಗದಲ್ಲಿ 8 ಮೇಕೆ ಬಲಿ?

ಶಿವಮೊಗ್ಗ ಜಿಲ್ಲೆಯ ಮತ್ತೂರಿನ ಹೊರವಲಯದ ಶ್ರೀಕಂಠಪುರದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿದ್ದ ಸೋಮಯಾಗದಲ್ಲಿ 8 ಮೇಕೆ ಬಲಿಕೊಟ್ಟಿರುವ ವಿಚಾರ...
ಸೋಮಯಾಗ
ಸೋಮಯಾಗ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಮತ್ತೂರಿನ ಹೊರವಲಯದ ಶ್ರೀಕಂಠಪುರದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿದ್ದ ಸೋಮಯಾಗದಲ್ಲಿ 8 ಮೇಕೆ ಬಲಿಕೊಟ್ಟಿರುವ ವಿಚಾರ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಸಂಕೇತಿ ಬ್ರಾಹ್ಮಣ ಸಮುದಾಯದಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ.
ಕಳೆದ ಏಪ್ರಿಲ್ 22ರಿಂದ 27ರವರೆಗೆ ಡಾ. ಸನತ್​ಕುಮಾರ್ ಅವರ ಅಡಿಕೆ ಕಣದಲ್ಲಿ ಈ ಸೋಮಯಾಗ ನಡೆದಿದ್ದು, ಮೇಕೆಗಳನ್ನು ಬಲಿ ನೀಡಿ, ಅದರ ಮಾಂಸ ಹಾಗೂ ಸೋಮರಸವನ್ನು ಪ್ರಸಾದವಾಗಿ ನೀಡಲಾಗಿದೆ ಎಂಬ ಆರೋಪಗಳು ಕೇಳಿ ಬಿಂದಿವೆ. ಇದಕ್ಕೆ ಪೂರಕವಾಗಿ ಪ್ರಾಣಿ ಬಲಿ ನೀಡಿರುವ ವೀಡಿಯೋ ತುಣುಕು ಈಗ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಅಗ್ನಿಯಲ್ಲಿ ಬೆಂದಿರುವ ಮಾಂಸವನ್ನು ಪ್ರಸಾದದ ರೂಪದಲ್ಲಿ ಸೇವಿಸಲಾಗಿದೆ ಎನ್ನುವುದು ಚರ್ಚೆಗೆ ಮತ್ತೊಂದು ಕಾರಣವಾಗಿದೆ.
ಮತ್ತೂರಿನಲ್ಲಿ ನಡೆದ ಯಾಗದಲ್ಲಿ ಆಂಧ್ರಪ್ರದೇಶ, ತಮಿಳುನಾಡು ಹಾಗೂ ರಾಜ್ಯದ 17 ಋತ್ವಿಜರು ಭಾವಹಿಸಿ, ಅಹೋರಾತ್ರಿ ಯಾಗ ನಡೆಸಿದ್ದರು. ಲೋಕಕಲ್ಯಾಣದ ಹೆಸರಿನಲ್ಲಿ ಮೇಕೆ ಬಲಿ ಕೊಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಆಯೋಜಕ, ಡಾ. ಸನತ್​ಕುಮಾರ್ ಅವರು, ಇದು ಖಾಸಗಿಯಾದ ಕಾರ್ಯಕ್ರಮವೇ ಹೊರತು ಸಾರ್ವಜನಿಕವಾದುದಲ್ಲ. ಯಾವುದೇ ರಾಜಕೀಯ ಉದ್ದೇಶವನ್ನಿಟ್ಟುಕೊಂಡು ನಡೆಸಿದ್ದೂ ಅಲ್ಲ. ಲೋಕಕಲ್ಯಾಣಕ್ಕಾಗಿ ಸೋಮಯಾಗ ನಡೆಸಲಾಗಿದೆಯಷ್ಟೆ. ಮೇಕೆಯನ್ನು ಬಲಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಪ್ರಾಣಿ ಪೂಜೆಯ ಬಳಿಕ ಏನು ಮಾಡಿದ್ದೇವೆ ಎನ್ನುವುದರ ಬಗ್ಗೆ ಯಾರೂ ಸತ್ಯ ತಿಳಿಯಲು ಯತ್ನಿಸುತ್ತಿಲ್ಲ ಎಂದಿದ್ದಾರೆ.
ಸೋಮಯಾಗಕ್ಕಾಗಿ ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಸೋಮ ಎಂಬ ಬಳ್ಳಿಯನ್ನು ತಂದು ಅದನ್ನು ಅರೆದು ಗಂಗೆಯಲ್ಲಿ ಬೆರೆಸಿ ಅಗ್ನಿಗೆ ಅರ್ಪಣೆ ಮಾಡಿ, ಎಲ್ಲರಿಗೂ ತೀರ್ಥ ರೂಪದಲ್ಲಿ ಹಂಚಲಾಗಿತ್ತು. ಯಾಗಕ್ಕಾಗಿ 5 ರೀತಿಯ ಹಸು, ಆಡುಗಳಿಗೆ ಪೂಜೆ ಮಾಡಲಾಗಿತ್ತು. ಹಾಗಾಗಿ ಯಾಗದಲ್ಲಿ ಯೂಪ ಎಂಬ ಕಂಬಕ್ಕೆ ಆಡುಗಳನ್ನು ಕಟ್ಟಲಾಗಿತ್ತು. ಪೂಜೆಯ ಬಳಿಕ ಆಡುಗಳನ್ನು ಬಿಡಲಾಗಿತ್ತು ಎಂದು ತಿಳಿಸಿದ್ದಾರೆ.
ಈ ಯಾಗಕ್ಕಾಗಿ 10ರಿಂದ 15 ಲಕ್ಷ ರೂಪಾಯಿ ಖರ್ಚಾಗಿದೆ. ವಿಷಯ ಸರಿಯಾಗಿ ತಿಳಿದುಕೊಳ್ಳದೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸನತ್ ಕುಮಾರ್ ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com