
ಮೈಸೂರು: ದಂತ ಚೋರ ವೀರಪ್ಪನ್ ಸೇರಿದಂತೆ ರಾಜ್ಯದ ನಾನಾ ಮೂಲಗಳ ಬೇಟೆಗಾರರಿಂದ ವಶಪಡಿಸಿಕೊಳ್ಳಲಾದ ಅಪಾರ ಪ್ರಮಾಣದ ಆನೆದಂತಗಳನ್ನು ಬೆಂಕಿಹಾಕಿ ನಾಶಪಡಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.
ಈಗ್ಗೆ ಕೆಲ ದಿನಗಳ ಹಿಂದಷ್ಟೇ ಆಫ್ರಿಕನ್ ದೇಶ ಕೀನ್ಯಾದಲ್ಲಿ ಬೇಟೆಗಾರರಿಂದ ವಶಪಡಿಸಿಕೊಂಡಿದ್ದ ನೂರಾರು ಕೋಟಿ ಮೌಲ್ಯದ ಭಾರಿ ಪ್ರಮಾಣದ ಆನೆದಂತಗಳನ್ನು ಬೆಂಕಿ ಹಾಕಿ ನಾಶಪಡಿಸಲಾಗಿತ್ತು. ಏಕಕಾಲಕ್ಕೆ ಭಾರಿ ಪ್ರಮಾಣದ ಆನೆ ದಂತಗಳಿಗೆ ಬೆಂಕಿ ಇಟ್ಟ ಪ್ರಕರಣ ವಿಶ್ವಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿತ್ತು. ಕೀನ್ಯಾ ಇತಿಹಾಸದಲ್ಲಿಯೇ ಅಷ್ಟು ದೊಡ್ಡ ಪ್ರಮಾಣದಲ್ಲಿ ಆನೆದಂತಗಳನ್ನು ನಾಶಪಡಿಸಿದ್ದು ಇದೇ ಮೊದಲ ಬಾರಿಯಾಗಿತ್ತು. ಇದೀಗ ಅಂತಹುದೇ ಕಾರ್ಯಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದ್ದು, ದಶಕಗಳಿಂದ ದಂತ ಚೋರ ವೀರಪ್ಪನ್ ಸೇರಿದಂತೆ ವಿವಿಧ ಬೇಟೆಗಾರರಿಂದ ವಶಪಡಿಸಿಕೊಳ್ಳಲಾದ ಅಪಾರ ಪ್ರಮಾಣದ ಆನೆದಂತಗಳನ್ನು ನಾಶಪಡಿಸಲು ಸರ್ಕಾರ ಚಿಂತನೆಯಲ್ಲಿ ತೊಡಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ವನ್ಯಜೀವಿ ಘಟಕದ ಮುಖ್ಯಸ್ಥ ಎಂಪಿ ಹೊಸ್ ಮಠ್ ಅವರು, ರಾಜ್ಯ ಸಂಗ್ರಹಾಗಾರದಲ್ಲಿ ದಶಕಗಳಿಂದ ಇಡಲಾಗಿದ್ದ ಅಪಾರ ಪ್ರಮಾಣದ ಆನೆದಂತಗಳನ್ನು ಬೆಂಕಿಹಾಕಿ ನಾಶಪಡಿಸಲಾಗುತ್ತದೆ. ಬಹುಶಃ ಅಕ್ಟೋಬರ್ ನಲ್ಲಿ ಈ ಕಾರ್ಯ ನಡೆಯಲಿದ್ದು, ಪ್ರಸ್ತುತ ಸಂಗ್ರಹಾಗಾರದಲ್ಲಿರುವ 12 ಟನ್ ಆನೆದಂತಗಳ ಪೈಕಿ ಮೊದಲ ಹಂತದ ಕಾರ್ಯಾಚರಣೆಯಲ್ಲಿ 6 ಟನ್ ಆನೆದಂತಗಳನ್ನು ಬೆಂಕಿ ಹಾಕಿ ನಾಶಪಡಿಸಲಾಗುತ್ತದೆ. 2ನೇ ಹಂತದಲ್ಲಿ ಉಳಿದ 6 ಟನ್ ಆನೆದಂತಗಳಿಗೆ ಬೆಂಕಿ ಹಾಕಿ ನಾಶಪಡಿಸಲಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಏಷ್ಯನ್ ಆನೆಗಳು ಇದ್ದು, ದಶಕಗಳ ಹಿಂದ ಸಾಕಷ್ಟು ಬೇಟೆಗಾರರು ಭಾರಿ ಪ್ರಮಾಣದಲ್ಲಿ ಆನೆಗಳನ್ನು ಬೇಟೆಯಾಡಿ ದಂತಗಳನ್ನು ಕದಿಯುತ್ತಿದ್ದರು. ಸರ್ಕಾರದ ಕಠಿಣ ಕ್ರಮ ಮತ್ತು ಭದ್ರತಾ ಕಾರ್ಯಾಚರಣೆ ಬಳಿಕ ಆನೆ ದಂತ ಕಳ್ಳತನ ಪ್ರಮಾಣ ಕಡಿಮೆಯಾಗಿತ್ತು. ಪ್ರಮುಖವಾಗಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಆಂಧ್ರ ಪ್ರದೇಶ ರಾಜ್ಯಗಳಿಗೆ ತಲೆನೋವಾಗಿ ಪರಿಣಮಿಸಿದ್ದ ದಂತ ಚೋರ ವೀರಪ್ಪನ್ ಮರಣಾನಂತರ ಆನೆಗಳ ಬೇಟೆ ಬಹುತೇಕ ಸ್ಥಗಿತವಾಗಿತ್ತು. ಈತನ ಗ್ಯಾಂಗ್ ನಿಂದಲೇ ಸಾಕಷ್ಟು ಪ್ರಮಾಣದಲ್ಲಿ ಆನೆ ದಂತಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಹೀಗೆ ವಶಪಡಿಸಿಕೊಂಡ ಭಾರಿ ಪ್ರಮಾಣದ ಆನೆದಂತಗಳನ್ನು ಪ್ರಸ್ತುತ ಮೈಸೂರಿನ ಗಂಧದ ಕೋಟೆ ಸರ್ಕಾರಿ ಸಂಗ್ರಹಾಗಾರದಲ್ಲಿ ಭಾರಿ ಭದ್ರತೆಯೊಂದಿಗೆ ಶೇಖರಿಸಡಲಾಗಿದ್ದು, ಸುಮಾರು ದಶಕಗಳಿಂದ 12 ಟನ್ ಆನೆದಂತಗಳನ್ನು ಇಲ್ಲಿ ಸಂಗ್ರಹಿಸಡಲಾಗಿದೆ.
ಇನ್ನು ಈ ಆನೆದಂತಗಳ ಭದ್ರತೆ ಮತ್ತು ಸಂಗ್ರಹಾಗಾರದ ನಿರ್ವಹಣೆ ಸರ್ಕಾರದ ಬೊಕ್ಕಸಕ್ಕೆ ದುಬಾರಿಯಾಗುತ್ತಿರುವ ಹಿನ್ನಲೆಯಲ್ಲಿ ಚೀನಾ ಸರ್ಕಾರದ ನಡೆಯಿಂದ ಸ್ಪೂರ್ತಿ ಪಡೆದಿರುವ ಕರ್ನಾಟಕ ಸರ್ಕಾರ ಈ ಅಪಾರ ಪ್ರಮಾಣದ ಆನೆ ದಂತಗಳನ್ನು ಬೆಂಕಿ ಹಾಕಿ ನಾಶಪಡಿಸಲು ಮುಂದಾಗಿದೆ.
ಸರ್ಕಾರದ ನಡೆಗೆ ಮೆಚ್ಚುಗೆ
ಇನ್ನು ಸರ್ಕಾರದ ಈ ನಡೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವನ್ಯಜೀವಿ ತಜ್ಞ ಪ್ರವೀಣ್ ಭಾರ್ಗವ್ ಅವರು, ಆನೆದಂತಗಳನ್ನು ನಾಶಪಡಿಸುವ ಸರ್ಕಾರ ಕ್ರಮ ಸಮಂಜಸವಾಗಿದೆ. ಆನೆದಂತಗಳನ್ನು ಸಂಗ್ರಹಾಗಾರದಲ್ಲಿ ಶೇಖರಿಸಿಡುವುದು ನಿಜಕ್ಕೂ ಸುರಕ್ಷಿತ ಕ್ರಮವಲ್ಲ. ವಿಶ್ವ ಮಾರುಕಟ್ಟೆಯಲ್ಲಿ ಆನೆದಂತಗಳಿಗೆ ಅಪಾರ ಪ್ರಮಾಣದ ಬೆಲೆ ನೀಡಲಾಗುತ್ತದೆ. ಹೀಗಾಗಿ ಬೇಟೆಗಾರರು, ಕಳ್ಳರು, ಸ್ಮಗ್ಲರ್ ಗಳು ಇವುಗಳನ್ನು ಅಪಹರಿಸುವ ಸಲುವಾಗಿ ಭದ್ರತಾ ವ್ಯವಸ್ಥೆಗೆ ಮಾರಕವಾಗುವ ಸಾಧ್ಯತೆ ಇದೆ. ಇಷ್ಟೇ ಏಕೆ ಈ ಹಿಂದೆ ಸಿಬಿಐ ಅಧಿಕಾರಿಗಳು ಅರಣ್ಯಾಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿದ್ದಾಗ ಅಲ್ಲಿಯೂ ಆನೆದಂತಗಳು ಸಿಕ್ಕ ಪ್ರಕರಣಗಳು ಕೂಡ ನಮ್ಮಲ್ಲಿ ದಾಖಲಾಗಿವೆ. ಹೀಗಾಗಿ ಆನೆದಂತ ಸಂಗ್ರಹ ಎಂದಿಗೂ ಸರ್ಕಾರ ಭದ್ರತಾ ವ್ಯವಸ್ಥೆಗೆ ದೊಡ್ಡ ಆತಂಕವಾಗಬಲ್ಲದು. ಈ ನಿಟ್ಟಿನಲ್ಲಿ ಸರ್ಕಾರದ ಕ್ರಮ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದ್ದಾರೆ.
ಮೊದಲ ಬಾರಿಗೆ ಭಾರತದಲ್ಲಿ ಆನೆದಂತಕ್ಕೆ ಬೆಂಕಿ
ಭಾರತೀಯ ವಿಜ್ಞಾನ ಸಂಸ್ಥೆಯ ಏಷ್ಯನ್ ವನ್ಯಜೀವಿ ಮತ್ತು ಹವಾಮಾನ ವಿಭಾಗದ ತಜ್ಞ ರಮಣ್ ಸುಕುಮಾರ್ ಹೇಳಿರುವಂತೆ ಕರ್ನಾಟಕ ಸರ್ಕಾರದ ಈ ಕ್ರಮ ಭಾರತ ಇತಿಹಾಸದಲ್ಲಿಯೇ ಮೊದಲ ಬಾರಿಯಾಗಿದ್ದು, ಸರ್ಕಾರ ಸಾರ್ವಜನಿಕವಾಗಿ ಆನೆದಂತಗಳನ್ನು ಬೆಂಕಿ ಇಟ್ಟು ನಾಶಪಡಿಸುತ್ತಿರುವುದು ಇದೇ ಮೊದಲು. ಸರ್ಕಾರದ ಕ್ರಮದಿಂದಾಗಿ ಆನೆಗಳನ್ನು ಬೇಟೆಯಾಡುವ ಬೇಟೆಗಾರರಲ್ಲಿ ಆನೆದಂತಗಳಿಗೆ ಬೆಲೆ ಇಲ್ಲ ಎಂಬ ಭಾವನೆ ಮೂಡಿ ಆನೆ ಬೇಟೆಗೆ ಅವರು ಮುಂದಾಗದೇ ಇರಬಹುದು. ಅರಣ್ಯ ಇಲಾಖೆ ಆನೆದಂತಗಳನ್ನು ನಾಶಪಡಿಸುವ ಸಂಬಂಧ ತಮ್ಮನ್ನು ಸಂಪರ್ಕಿಸಿದ್ದು, ಬಳಿಕ ಅವುಗಳ ನಾಶಕ್ಕೆ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.
ಒಟ್ಟಾರೆ ಆನೆ ಬೇಟೆ ತಡೆಯುವ ನಿಟ್ಟಿನಲ್ಲಿ ಕೀನ್ಯಾ ಮಾದರಿಯನ್ನು ಅನುಸರಿಸುತ್ತಿರುವ ಕರ್ನಾಟಕ ಅರಣ್ಯ ಇಲಾಖೆಯ ಯೋಜನೆ ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Advertisement