ನಮ್ಮಲ್ಲೇ ಬರ, ಆದರೂ ಕರ್ನಾಟಕದಿಂದ ನೀರು ಪಡೆಯಲಿದೆ ಮೆಹಬೂಬ್ ನಗರ!
ಹೈದರಾಬಾದ್: ಕರ್ನಾಟಕದಂತೆಯೇ ಹೈದರಾಬಾದ್ ನಲ್ಲೂ ಬರ ಪರಿಸ್ಥಿತಿ ಎದುರಾಗಿದ್ದು ಅಲ್ಲಿನ ಮೆಹಬೂಬ್ ನಗರದಲ್ಲಿ ಹನಿ ನೀರಿಗೂ ತತ್ವಾರ ಉಂಟಾಗಿದೆ. ಮೆಹಬೂಬ್ ನಗರಕ್ಕೆ ನೀರು ಪೂರೈಕೆಯಾಗುವ ಜುರಾಲ ಜಲಾಶಯದಲ್ಲಿ ನೀರಿನ ಕೊರತೆ ಎದುರಾಗಿರುವ ಪರಿಣಾಮ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ ತೆಲಂಗಾಣದ ನೀರಾವರಿ ಸಚಿವ ಹರೀಶ್ ರಾವ್, ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಅವರೊಂದಿಗೆ ಚರ್ಚೆ ನಡೆಸಿದ್ದು ನಾರಾಯಣಪುರ ಜಲಾಶಯದ ಮೂಲಕ ನೀರು ನೀಡಬೇಕೆಂದು ಮನವಿ ಮಾಡಿದ್ದಾರೆ. ತೆಲಂಗಾಣದ ಬೇಡಿಕೆಗೆ ಸ್ಪಂದಿಸಿರುವ ಕರ್ನಾಟಕ ಒಂದು ಟಿಎಂಸಿ ನೀರನ್ನು ಪೂರೈಕೆ ಮಾಡಲು ಒಪ್ಪಿಗೆ ಸೂಚಿಸಿದೆ. ತೆಲಂಗಾಣ ಸಚಿವ ಟಿ ಹರೀಶ್ ರಾವ್ ಅವರು ನಾಲ್ಕು ಟಿಎಂಸಿ ನೀರಿಗಾಗಿ ಒತ್ತಾಯಿಸಿದ್ದರಾದರೂ ಕರ್ನಾಟಕ ಸರ್ಕಾರ ಒಂದು ಟಿಎಂಸಿ ನೀರನ್ನು ಮಾತ್ರ ಪೂರೈಕೆ ಮಾಡುವುದಾಗಿ ತಿಳಿಸಿದೆ.
ಕಳೆದ ವರ್ಷದ ಮುಂಗಾರಿನಲ್ಲಿ ಜುರಾಲ ಜಲಾಶಯ ಹೆಚ್ಚಿನ ನೀರಿನ ಒಳಹರಿವು ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ನೀರಿಗಾಗಿ ತತ್ವಾರ ಉಂಟಾಗಿದೆ. ತೆಲಂಗಾಣ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ಪ್ರಸ್ತುತ 80 ಕ್ಯುಸೆಕ್ಸ್ ನಷ್ಟು ನೀರನ್ನು ಮೇ.14 ರಂದು ಬಿಡುಗಡೆ ಮಾಡಿದೆ.