ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ಲಕ್ಷ, ಲಕ್ಷ ಸಂಬಳದ ಆಫರ್

ಸ್ವ ಇಚ್ಚೆಯಿಂದ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲು ಮುಂದೆ ಬರುವ ವೈದ್ಯರಿಗೆ ರಾಜ್ಯ ಸರ್ಕಾರ ಉತ್ತಮ ಸಂಬಳದ ಆಫರ್ ನೀಡಿದೆ...
ಯು.ಟಿ ಖಾದರ್
ಯು.ಟಿ ಖಾದರ್

ಬೆಂಗಳೂರು: ಸ್ವ ಇಚ್ಚೆಯಿಂದ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲು ಮುಂದೆ ಬರುವ ವೈದ್ಯರಿಗೆ ರಾಜ್ಯ ಸರ್ಕಾರ ಉತ್ತಮ ಸಂಬಳದ ಆಫರ್ ನೀಡಿದೆ.

ಎಂಬಿಬಿಎಸ್  ಪದವೀಧರರ ಗ್ರಾಮೀಣ ಸೇವೆ ಕಡ್ಡಾಯ ಕಾಯ್ದೆಗೆ ಹೈಕೋರ್ಟ್​ನ ಮಧ್ಯಂತರ ತಡೆಯಾಜ್ಞೆಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಈ ನಿರ್ಧಾರ ಕೈಗೊಂಡಿದೆ.

ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯುಟಿ ಖಾದರ್, ಇಲಾಖೆಯಲ್ಲಿ  ಖಾಲಿ ಇರುವ 940 ತಜ್ಞ ವೈದ್ಯರು ಹಾಗೂ 257 ಸಾಮಾನ್ಯ ವೈದ್ಯಾಧಿಕಾರಿಗಳ ಹುದ್ದೆಗೆ ನೇಮಕಗೊಳ್ಳಲು ಎಂಬಿಬಿಎಸ್ ಮತ್ತು ಪಿಜಿ ವೈದ್ಯರು ಸ್ವ ಇಚ್ಚೆಯಿಂದ ಮುಂದೆ ಬಂದರೆ ಅವಕಾಶ ಕಲ್ಪಿಸಲಾಗುವುದು.

ಸಾಮಾನ್ಯ ವೈದ್ಯರಿಗೆ ಮಾಸಿಕ 40,000 ರೂ., ಪಿಜಿ ಹೊಂದಿರುವ ತಜ್ಞ ವೈದ್ಯರಿಗೆ 43,200 ರೂ. ಹಾಗೂ ಸೂಪರ್ ಸ್ಪೆಷಾಲಿಟಿ ವೈದ್ಯರಿಗೆ 46,600 ರೂ. ವೇತನ ಪಾವತಿಸಲಾಗುವುದು ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ 20-25 ಸಾವಿರ ರೂ. ವೇತನಕ್ಕೆ ದಿನವಿಡೀ ಸೇವೆ ಸಲ್ಲಿಸುವ ವ್ಯವಸ್ಥೆ ಇದ್ದು, ಸರ್ಕಾರ ಉತ್ತಮ ಸಂಬಳ ಮತ್ತು ಸೌಲಭ್ಯ ನೀಡುವುದರಿಂದ ಬಹಳಷ್ಟು ಮಂದಿ ಸ್ವ ಇಚ್ಚೆಯಿಂದ ಗ್ರಾಮೀಣ ಸೇವೆಗೆ ಮುಂದೆ ಬರುವ ನಿರೀಕ್ಷೆಯಿದೆ. ಆಸಕ್ತರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತರನ್ನು ಸಂರ್ಪಸಿದರೆ ತಕ್ಷಣ ನೇಮಕಾತಿ ಹಾಗೂ ಸ್ಥಳ ನಿಯುಕ್ತಿ ಮಾಡಲಾಗುವುದು.

ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ತಜ್ಞ ವೈದ್ಯರ ಕೊರತೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ನೋಂದಣಿ ಮಾಡಿದರೆ ಮಾಸಿಕ 10 ಸಾವಿರ ರೂ. ನಿಶ್ಚಿತ ವೇತನ ಹಾಗೂ ಪ್ರತಿ ರೋಗಿ ಚಿಕಿತ್ಸೆಗೆ 2 ಸಾವಿರ ರೂ. ನೀಡಲಾಗುವುದು ಎಂದು ಪರ್ಯಾಯ ವ್ಯವಸ್ಥೆ ಕುರಿತು ಸಚಿವರು ವಿವರಿಸಿದರು.

2006ರ ಕಾಯ್ದೆಯಡಿ ಎಂಬಿಬಿಎಸ್ ಹಾಗೂ ಪಿಜಿ ವೈದ್ಯರಿಗೆ 3 ವರ್ಷಗಳ ಗ್ರಾಮೀಣ ಸೇವೆ ಕಡ್ಡಾಯವಾಗಿತ್ತು. ಇದಕ್ಕೆ ಒಪ್ಪದ ಎಂಬಿಬಿಎಸ್ ಪದವೀಧರರು 1 ಲಕ್ಷ ರೂ., ಡಿಪ್ಲೊಮಾ ವೈದ್ಯರು 3 ಲಕ್ಷ ರೂ. ಹಾಗೂ ಪಿಜಿ ವೈದ್ಯರು 5 ಲಕ್ಷ ರೂ. ದಂಡ ಪಾವತಿಸಿ ಗ್ರಾಮೀಣ ಸೇವೆಯಿಂದ ವಿನಾಯಿತಿ ಪಡೆಯಬಹುದಾಗಿತ್ತು.

ಬಹಳಷ್ಟು ವೈದ್ಯ ಪದವೀಧರರು ದಂಡ ಶುಲ್ಕ ಪಾವತಿಸಿ ಗ್ರಾಮೀಣ ಸೇವೆಯಿಂದ ಪಾರಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಹೊಸ ಕಾಯ್ದೆ ರೂಪಿಸಿದ ರಾಜ್ಯ ಸರ್ಕಾರ, ಗ್ರಾಮೀಣ ಸೇವಾ ಅವಧಿಯನ್ನು ಒಂದು ವರ್ಷಕ್ಕೆ ಇಳಿಕೆ ಮಾಡಿತ್ತು ಮತ್ತು ಅದನ್ನು ಪದವಿ ಭಾಗವಾಗಿ ಪರಿಗಣಿಸಿತ್ತು. ಒಂದುವೇಳೆ, ಈ ನಿಯಮ ಪಾಲನೆಗೆ ಒಪ್ಪದಿದ್ದರೆ ಎಂಬಿಬಿಎಸ್, ಡಿಪ್ಲೊಮಾ ಹಾಗೂ ಪಿಜಿ ವೈದ್ಯರ ದಂಡದ ಮೊತ್ತವನ್ನು ಕ್ರಮವಾಗಿ 10 ಲಕ್ಷ ರೂ., 15 ಲಕ್ಷ ರೂ. ಹಾಗೂ 25 ಲಕ್ಷ ರೂ.ಗೆ ಏರಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಆದರೆ, ರಾಜ್ಯ ವಿಧಾನಮಂಡಲದ ಅನುಮೋದನೆ ಪಡೆದು ಅಧಿಸೂಚನೆಗೊಂಡಿದ್ದ ನೂತನ ಕಾಯ್ದೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಹಿನ್ನೆಲೆಯಲ್ಲಿ ಗೊಂದಲ ಉದ್ಭವವಾಗಿದ್ದು ಮಾತ್ರವಲ್ಲದೆ, ಗ್ರಾಮೀಣ ಭಾಗದಲ್ಲಿ ತಜ್ಞ ವೈದ್ಯರ ಅಭಾವ ತೀವ್ರಗೊಂಡಿದೆ. ತಡೆಯಾಜ್ಞೆ ತೆರವಾಗಿ ಮುಂದಿನ ಸಾಲಿಗೆ ಕಾಯ್ದೆ ಜಾರಿಯಾಗಲಿದೆ ಎಂಬ ಭರವಸೆಯಲ್ಲಿ ಸದ್ಯಕ್ಕೆ 2006ರ ಕಾಯ್ದೆಯನ್ನೇ ಜಾರಿಯಲ್ಲಿಡಲಾಗಿದೆ ಮತ್ತು ವೈದ್ಯರ ಅಭಾವ ನೀಗಲು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಖಾದರ್ ತಿಳಿಸಿದರು.

ಇನ್ನೂ ಯಾದಗಿರಿ, ಬಾಗಲಕೋಟೆ, ವಿಜಯಾಪುರ, ಕಲ್ಬುರ್ಗಿ, ಕೊಪ್ಪಳ, ರಾಯಚೂರು, ಬಳ್ಳಾರಿ, ಯಾದಗಿರಿ, ಮತ್ತು ಗದಗ ಜಿಲ್ಲೆಗಳಲಲ್ಲಿ ಕಾರ್ಯ ನಿರ್ವಹಿಸಲು ಸ್ವಇಚ್ಚೆಯಿಂದ ಮುಂದೆ ಬರುವ ವೈದ್ಯರಿಗೆ  ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ತಿಂಗಳಿಗೆ 1.2 ಲಕ್ಷ ರು. ವೇತನ  ನೀಡುವ ಭರವಸೆ ನೀಡಿದ್ದಾರೆ.
   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com