ಬೆಂಗಳೂರು: ರಾಜ್ಯದಲ್ಲಿರುವ ಸುಮಾರು ಮೂರು ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಬೀಗ ಜಡಿಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕಡಿಮೆ ಮಕ್ಕಳಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಬೀಗ ಹಾಕಲು ಸರ್ಕಾರ ನಿರ್ಧರಿಸಿದೆ. ಪ್ರಸ್ತುತ ವರ್ಷದಲ್ಲಿ ಸರ್ಕಾರಿ ಶಾಲೆಗಳಿಗೆ 10 ಮಕ್ಕಳಿಗಿಂತ ಕಡಿಮೆ ಮಕ್ಕಳ ದಾಖಲಾತಿಯಾದರೆ, ಅಂತಹ ಶಾಲೆಗಳನ್ನು ಮುಚ್ಚಲು ಸರ್ಕಾರ ತೀರ್ಮಾನಿಸಿದೆ.
2015-16 ಸಾಲಿನ ಅಂಕಿ ಅಂಶಗಳ ಪ್ರಕಾರ ವರದಿಯೊಂದನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ತಯಾರಿಸಿದೆ. ಅದರಲ್ಲಿ 10ಕ್ಕಿಂತ ಕಡಿಮೆ ದಾಖಲಾತಿಗಳ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಆದರೆ ಸರ್ಕಾರ ಮಾತ್ರ ಶಾಲೆಗಳನ್ನು ಮುಚ್ಚುತ್ತಿಲ್ಲ, ವಿಲೀನಗೊಳಿಸಲಾಗುತ್ತಿದೆ ಎಂದು ಸಮಜಾಯಿಸಿ ನೀಡುತ್ತಿದೆ.
ರಾಜ್ಯದಲ್ಲಿ ಸುಮಾರು 44 ಸಾವಿರ ಪ್ರಾಥಮಿಕ ಶಾಲೆಗಳಿದ್ದು, ಅದರಲ್ಲಿ ಕೆಲವು ಶಾಲೆಗಳಲ್ಲಿ ಮಕ್ಕಳ ದಾಖಲಾತಿಗಳಾಗಿಲ್ಲ. ಶಾಲೆಗಳಲ್ಲಿ 20ಕ್ಕಿಂತ ಕಡಿಮೆ ದಾಖಲಾತಿ, ಇನ್ನು ಕೆಲವು ಶಾಲೆಗಳಲ್ಲಿ ಒಂದರಿಂದ ಎರಡೂ ದಾಖಲಾತಿಗಳಾಗಿವೆ.
ಖಾಸಗಿ ಶಾಲೆಗಳಲ್ಲಿ ಬಡ ಮಕ್ಕಳ ಶಿಕ್ಷಣಕ್ಕಾಗಿ ಆರ್ ಟಿಇ ಕಾಯ್ದೆ ಜಾರಿಗೆ ತಂದಿರುವುದು ಇದರ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷ ಸಾವಿರಾರು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದರು. ಈ ಬಾರಿ ಶೇ.25ರಷ್ಟು ವಿದ್ಯಾರ್ಥಿಗಳು ಆರ್ ಟಿಇ ಕೋಟಾದಡಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದಾರೆ.