
ಮೈಸೂರು: ಅಭಿವೃದ್ಧಿ ಹೆಸರಲ್ಲಿ ಚಾಮುಂಡಿ ಬೆಟ್ಟವನ್ನು ನಾಶಪಡಿಸಲಾಗುತ್ತಿದೆ ಎಂದು ಖ್ಯಾತ ಲೇಖಕ ಎಲ್ ಬೈರಪ್ಪ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಹೆಸರಲ್ಲಿ ಚಾಮುಂಡಿ ಬೆಟ್ಟದ ಹಸಿರು ಸಮೃದ್ಧಿ ಹಾಳಾಗುತ್ತಿದೆ. ಜನರನ್ನು ಹೆಚ್ಚಾಗಿ ಆಕರ್ಷಿಸುವ ನಿಟ್ಟಿನಲ್ಲಿ ಇಲ್ಲಿನ ರಸ್ತೆಗಳನ್ನು ಅಗಲೀಕರಣ ಮಾಡಲಾಗುತ್ತಿದ್ದು, ಇದರಿಂದಾಗಿ ಇಲ್ಲಿನ ಸುತ್ತಮುತ್ತಲಿನ ಪರಿಸರಕ್ಕೆ ಧಕ್ಕೆಯಾಗುತ್ತದೆ. ಚಾಮುಂಡಿ ಬೆಟ್ಟ ಮೈಸೂರಿನ ಕಳಶವಿದ್ದಂತೆ. ರಾಜಕಾರಣಿಗಳು ಅಭಿವೃದ್ಧಿ ಹೆಸರಲ್ಲಿ ನಡೆಸುತ್ತಿರುವ ನಾಶ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು. ಬದಲಿಗೆ ಇಲ್ಲಿ ಮತ್ತಷ್ಟು ಮರಗಳನ್ನು ಸರ್ಕಾರವೇ ಬೆಳೆಸಬೇಕು ಎಂದು ಬೈರಪ್ಪ ಹೇಳಿದರು.
ಇದೇ ವೇಳೆ 2 ವರ್ಷ ಪೂರೈಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಎನ್ ಡಿಎ ಸರ್ಕಾರದ ಕಾರ್ಯವೈಖರಿಯನ್ನು ಕೊಂಡಾಡಿದ ಬೈರಪ್ಪ, ಪ್ರಧಾನಿ ಮೋದಿ ಅವರನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಹೋಲಿಕೆ ಮಾಡಿದರು. ಅಂತೆಯೇ ವಿಶ್ವದ ದೃಷ್ಟಿಯಲ್ಲಿ ಭಾರತೀಯರ ಗೌರವವನ್ನು ಮತ್ತು ಭಾರತೀಯರ ಘನತೆಯನ್ನು ಪ್ರಧಾನಿ ಮೋದಿ ಇಮ್ಮಡಿಗೊಳಿಸಿದ್ದಾರೆ ಎಂದು ಬೈರಪ್ಪ ಹೇಳಿದರು. ಅಂತೆಯೇ ಕೇಂದ್ರದ ಕಾಂಗ್ರೆಸ್ ಪಕ್ಷನ್ನು ಕುಟುಕಿದ ಬೈರಪ್ಪ ಅವರು, ಮಸೂದೆ ಅನುಮೋದನೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುವ ಮೂಲಕ ದೇಶದ ಅಭಿವೃದ್ಧಿಗೆ ತೊಡಕಾಗಿದೆ ಎಂದು ಅವರು ಹೇಳಿದರು.
Advertisement