ಕಠಿಣ ಶಿಸ್ತು ಕ್ರಮವೇ ಫಲಿತಾಂಶ ಕುಸಿಯಲು ಕಾರಣ: ಕಿಮ್ಮನೆ ರತ್ನಾಕರ್

ಪರೀಕ್ಷಾ ಸಮಯದಲ್ಲಿ ತೆಗೆದುಕೊಳ್ಳಲಾದ ಕಠಿಣ ಶಿಸ್ತು ಕ್ರಮವೇ ಫಲಿತಾಂಶ ಕುಸಿಯಲು ಪ್ರಮುಖ ಕಾರಣ ಎಂದು ಪ್ರಾಥಮಿಕ ಮತ್ತು ಫ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರಸ್ ಅವರು ಹೇಳಿದ್ದಾರೆ...
ಪ್ರಾಥಮಿಕ ಮತ್ತು ಫ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರಸ್
ಪ್ರಾಥಮಿಕ ಮತ್ತು ಫ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರಸ್

ಬೆಂಗಳೂರು: ಪರೀಕ್ಷಾ ಸಮಯದಲ್ಲಿ ತೆಗೆದುಕೊಳ್ಳಲಾದ ಕಠಿಣ ಶಿಸ್ತು ಕ್ರಮವೇ ಫಲಿತಾಂಶ ಕುಸಿಯಲು ಪ್ರಮುಖ ಕಾರಣ ಎಂದು ಪ್ರಾಥಮಿಕ ಮತ್ತು ಫ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರಸ್ ಅವರು ಹೇಳಿದ್ದಾರೆ.

ಸತತ ಎರಡು ಬಾರಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಅಕ್ರಮ ಮತ್ತು ಮರು ಪರೀಕ್ಷೆಗಳಂತಹ ಗೊಂದಲಗಳ ನಡುವೆಯೂ ನಿಗದಿತ ಸಮಯದಲ್ಲೇ ಪಿಯುಸಿ ಪರೀಕ್ಷೆ ಫಲಿತಾಂಶ ನಿನ್ನೆಯಷ್ಟೇ ಹೊರಬಿದ್ದಿತ್ತು. ಆದರೆ, ಈ ಬಾರಿಯ ಫಲಿತಾಂಶ ಹಿಂದಿನ ಬಾರಿಗಿಂತಲೂ ಕಡಿಮೆ ಫಲಿತಾಂಶದೊಂದಿಗೆ ಕಳಪೆ ಮಟ್ಟದಲ್ಲಿ ಕಂಡು ಬಂದಿದೆ.

ಈ ಹಿನ್ನೆಲೆಯಲ್ಲಿ ಫಲಿತಾಂಶ ಕುರಿತಂತೆ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪರೀಕ್ಷಾ ಸಮಯದಲ್ಲಿ ಸಾಕಷ್ಟು ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗಿತ್ತು. ಬಹುತೇಕ ಕಾಲೇಜುಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಇದಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ಸ್ಕ್ಯಾಡ್ ಗಳನ್ನು ನಿಯೋಜಿಸಿ ತಪಾಸಣೆ ನಡೆಸಲಾಗುತ್ತಿತ್ತು. ಹೀಗಾಗಿಯೇ ಫಲಿತಾಂಶ ಕುಸಿದಿದೆ ಎಂದು ಹೇಳಿದ್ದಾರೆ.

ಸರ್ಕಾರ ಪ್ರತೀವರ್ಷದಂತೆಯೇ ಪರೀಕ್ಷೆಯನ್ನು ನಡೆಸುತ್ತಿತ್ತು. ಆದರೆ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಯಿತು ಎಂದು ಹೇಳಿದ್ದಾರೆ.

ಕಿಮ್ಮನೆ ರತ್ನಾಕರ್ ಅವರು ಈ ಹಿಂದೆ ಎಸ್ಎಸ್ಎಲ್ ಸಿ ಫಲಿತಾಂಶ ಹೊರಬಿದ್ದಾಗಲೂ ಇದೇ ರೀತಿಯಾಗಿಯೇ ಉತ್ತರಿಸಿದ್ದರು.

ಇನ್ನು ಈ ಬಗ್ಗೆ ವಿದ್ಯಾರ್ಥಿಗಳ ಅಭಿಪ್ರಾಯ ಬೇರೆಯಾಗಿದ್ದು, ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಒತ್ತಡವಿತ್ತು. ಎರಡು ಬಾರಿ ರಸಾಯನಶಾಸ್ತ್ರ ಪತ್ರಿಕೆ ಸೋರಿಕೆಯಾದಾಗ ಪರೀಕ್ಷಾ ಸಮಯದ ಕುರಿತು ಗೊಂದಲಗಳು ಸೃಷ್ಟಿಯಾಗಿದ್ದವು. ಇದರಿಂದ ಸಾಕಷ್ಟು ಸಮಸ್ಯೆಯಾಗಿತ್ತು ಎಂದು ಹೇಳಿದ್ದಾರೆ.

ಇದಲ್ಲದೆ, ಪರೀಕ್ಷೆ ನಂತರ ಶಿಕ್ಷಕರು ಕೂಡ ಮೌಲ್ಯಮಾಪವನ್ನು ಬಹಿಷ್ಕರಿಸಿ ಸುಮಾರು 15 ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು. ಇದು ನಮ್ಮ ಆತಂಕವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿತ್ತು. ಇಂತಹ ಸಂದರ್ಭದಲ್ಲಿ ಸರಿಯಾದ ರೀತಿಯಲ್ಲಿ ಮೌಲ್ಯಮಾಪನ ನಡೆದಿದೆ ಎಂದು ನಂಬಲುತಾನೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಅರ್ಹರಲ್ಲ ಶಿಕ್ಷಕರನ್ನು ಮೌಲ್ಯಮಾಪನಕ್ಕೆ ನಿಯೋಜಿಸಲಾಗಿತ್ತು ಎಂಬ ವರದಿಯನ್ನು ನಾವು ಓದಿದ್ದೆವು. ಮೌಲ್ಯಮಾಪನ ಪ್ರಕ್ರಿಯೆ ನಡೆದಿರುವ ಬಗ್ಗೆ ನನಗೆ ಸಂಶಯವಿದೆ ಎಂದು ವಿದ್ಯಾರ್ಥಿ ಪುನರ್ವ ನಾಗರಾಜ್ ಹೇಳಿಕೊಂಡಿದ್ದಾರೆ.

ಇನ್ನು ಈ ಎಲ್ಲಾ ಗೊಂದಲ ಹಾಗೂ ಸಂಶಯಗಳ ಕುರಿತಂತೆ ಅಧಿಕಾರಿಯೊಬ್ಬರು ಮಾತನಾಡಿದ್ದು, ಮೌಲ್ಯಮಾಪನಕ್ಕೆ ಅರ್ಹ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಒಂದು ವೇಳೆ ಇದರಲ್ಲಿ ನ್ಯೂನತೆಗಳೇನಾದರೂ ಕಂಡು ಬಂದರೆ, ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

26 ವಿದ್ಯಾರ್ಥಿಗಳ ಫಲಿತಾಂಶಕ್ಕೆ ತಡೆ
ದ್ವಿತೀಯ ಪಿಯು ಪ್ರಶ್ನೆಪತ್ರಿಕೆ ಸೋರಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಆರೋಪಿಗಳ ಮಕ್ಕಳ ಫಲಿತಾಂಶ ತಡೆಹಿಡಿಯಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಕಿಮ್ಮನೆ ರತ್ನಾಕರ್ ಅವರು, ಒಎಂಆರ್ ತಿದ್ದಿರುವುದು ಸೇರಿದಂತೆ ಅನೇಕ ಕಾರಣಗಳಿಂದ ಪ್ರತಿ ವರ್ಷ ಕೆಲವು ವಿದ್ಯಾರ್ಥಿಗಳ ಫಲಿತಾಂಶ ತಡೆ ಹಿಡಿಯಲಾಗುತ್ತದೆ ಎಂದು ಹೇಳಿದ್ದಾರೆ.

2013ರಲ್ಲಿ 3600, 2014ರಲ್ಲಿ 800 ಹಾಗೂ 2015 ರಲ್ಲಿ 148 ವಿದ್ಯಾರ್ಥಿಗಳ ಫಲಿತಾಂಶ ತಡೆ ಹಿಡಿಯಲಾಗಿತ್ತು. ಇದೇ ರೀತಿ ಈ ವರ್ಷ 26 ವಿದ್ಯಾರ್ಥಿಗಳ ಫಲಿತಾಂಶ ತಡೆ ಹಿಡಿಯಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಹೊಂದಿರುವ ಮಕ್ಕಳ ಅಥವಾ ಹೆಚ್ಚು ಫಲಿತಾಂಶ ಪಡೆದಿರುವ 11 ಕಾಲೇಜುಗಳ ವಿದ್ಯಾರ್ಥಿಗಳ ಫಲಿತಾಂಶ ತಡೆ ಹಿಡಿಯುವಂತೆ ತನಿಖಾಧಿಕಾರಿಗಳಿಂದ ಯಾವುದೇ ಪತ್ರ ಅಥವಾ ಮೌಖಿಕವಾಗಿ ಆದೇಶ ಬಂದಿಲ್ಲ. ಒಂದು ವೇಳೆ ಆದೇಶ ಬಂದಿದ್ದೇ ಆದರೆ, ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ 26 ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದ್ದು, ದಾಖಲೆಗಳನ್ನು ಒದಗಿಸಿದ ಬಳಿಕವಷ್ಟೇ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com