
ಬೆಂಗಳೂರು: ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸಿದ್ಧವಿದ್ದು, ಸಾಮೂಹಿಕ ಪ್ರತಿಭಟನೆ ತೀರ್ಮಾನವನ್ನು ಹಿಂಪಡೆಯುವಂತೆ ಪೇದೆಗಳಿಗೆ ರಾಜ್ಯ ಗೃಹ ಸಚಿವ ಪರಮೇಶ್ವರ್ ಅವರು ಮನವಿ ಮಾಡಿದ್ದಾರೆ.
ಈ ಕುರಿತಂತೆ ಶನಿವಾರ ಬೆಂಗಳೂರಿನ ವಿಕಾಸಸೌಧದಲ್ಲಿ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಭದ್ರತೆ ಒದಗಿಸುವ ಪೇದೆಗಳೇ ಪ್ರತಿಭಟನೆ ನಡೆಸಿದರೆ ಅವರ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಲು ಸಾಧ್ಯ. ಪೇದೆಗಳ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸಿದ್ಧವಿದೆ. ಇದಕ್ಕಾಗಿ ಈಗಾಗಲೇ ಖಾಲಿಯಿದ್ದ 25 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಇನ್ನು 8,500 ಪೊಲೀಸರು 6 ತಿಂಗಳಿನಲ್ಲಿ ಹುದ್ದೆಗೆ ಸೇರ್ಪಡೆಗೊಳ್ಳಲಿದ್ದಾರೆಂದು ಹೇಳಿದ್ದಾರೆ.
ಒಂದು ವೇಳೆ ಸರ್ಕಾರದ ಮನವಿಯನ್ನು ಧಿಕ್ಕರಿಸಿ ಪ್ರತಿಭಟನೆ ನಡೆಸಿದ್ದೇ ಪೋಲಿಸ್ ಪಡೆ (ಹಕ್ಕುಗಳ ನಿರ್ಬಂಧ) ಕಾಯ್ದೆ 1966 ಅಥವಾ ಪೊಲೀಸ್ ಮ್ಯಾನ್ಯುವಲ್ ರ ಅಡಿಯಲ್ಲಿ ಉಗ್ರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ವೇತರ ತಾರತಮ್ಯ, ರಜೆ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘ ಜೂನ್ 4 ರಂದು ಸಾಮೂಹಿಕ ಪ್ರತಿಭಟನೆ ನಡೆಸಲು ತೀರ್ಮಾನಿಸಿತ್ತು.
Advertisement