
ಬೆಳಗಾವಿ: ಸಚಿವ ತನ್ವೀರ್ ಸೇಠ್ ಅವರು ಅಶ್ಲೀಲ ಚಿತ್ರ ವೀಕ್ಷಣೆ ಮಾಡಿದ್ದೇ ಆಗಿದ್ದರೆ ಅವರ ವಿರುದ್ಧ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.
ಈ ಕುರಿತಂತೆ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ತಪ್ಪು ಯಾರೇ ಮಾಡಿದ್ದರೂ ಅದು ತಪ್ಪು. ತನ್ವೀರ್ ಸೇಠ್ ಅವರು ನಿಜವಾಗಿಯೂ ತಪ್ಪು ಮಾಡಿದ್ದೇ ಆಗಿದ್ದರೆ, ಅವರನ್ನು ಸಮರ್ಥಿಸಿಕೊಳ್ಳುವುದಿಲ್ಲ. ಪ್ರಕರಣ ಕುರಿತ ಸತ್ಯಾಸತ್ಯತೆಗಳನ್ನು ತಿಳಿದುಕೊಂಡು ಕ್ರಮ ಕೈಗೊಳ್ಳುತ್ತೇನೆಂದು ಹೇಳಿದ್ದಾರೆ.
ತನ್ವೀರ್ ಸೇಠ್ ಕುರಿತಂತೆ ಮಾಧ್ಯಮಗಳಲ್ಲಿ ಪ್ರಸಾರವಾದ ವಿಡಿಯೋಗಳು ಆಧಾರರಹಿತವಾಗಿದ್ದು ಎಂಬ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿರುವ ಅವರು, ಮಾಧ್ಯಮಗಳಲ್ಲಿ ಪ್ರಸಾರವಾದ ವಿಡಿಯೋಗಳು ಆಧಾರರಹಿತವಾಗಿದೆ ಎಂದು ನಾನು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ತನ್ವೀರ್ ಸೇಠ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂಬ ಬಿಜೆಪಿ ನಾಯಕರ ಆಗ್ರಹ ಕುರಿತ ಪ್ರಶ್ನೆಗೆ ಉತ್ತರಿಸಲು ಸಿದ್ದರಾಮಯ್ಯ ಅವರು ನಿರಾಕರಿಸಿದ್ದಾರೆ. ಈ ಹಿಂದೆ ವಿಧಾನಸೌಧದಲ್ಲಿ ಬಿಜೆಪಿ ನಾಯಕರು ಇದೇ ರೀತಿಯಾಗಿ ನಡೆದುಕೊಂಡಿದ್ದರು. ಬಿಜೆಪಿಯವರು ನಡೆದುಕೊಂಡಿದ್ದಕ್ಕಿಂತಲೂ ಈ ಪ್ರಕರಣ ಅಷ್ಟೊಂದು ಗಂಭೀರವಾದ ಪ್ರಕರಣವೇನಲ್ಲ. ಹಾಗೆಂದು ನಾನು ತನ್ವೀರ್ ಸೇಠ್ ಅವರನ್ನು ನಾನು ಸಮರ್ಥಿಸಿಕೊಳ್ಳುತ್ತಿಲ್ಲ.
ಪ್ರಕರಣ ಸಂಬಂಧ ಈಗಾಗಲೇ ಸ್ಪಷ್ಟನೆ ನೀಡಿವಂತೆ ತನ್ವೀರ್ ಸೇಠ್ ಅವರನ್ನು ಕೇಳಲಾಗಿದೆ. ಶನಿವಾರ ಅವರು ನಗರಕ್ಕೆ ಆಗಮಿಸುತ್ತಿದ್ದು, ಬೆಂಗಳೂರಿಗೆ ಬಂದ ಕೂಡಲೇ ಸ್ಪಷ್ಟನೆ ಪಡೆದು ನಂತರ ಸತ್ಯಾಸತ್ಯತೆಗಳನ್ನು ಅರಿತು ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
Advertisement