
ಮೈಸೂರು: ಮಹಿಳೆಯನ್ನು ವಶೀಕರಣ ಮಾಡಿಕೊಡುವುದಾಗಿ ಹೇಳಿದ ಡೋಂಗಿ ಬಾಬಾನೋರ್ವ ಯುವಕನಿಂದ ಚಿನ್ನ ಪಡೆದು ಪರಾರಿಯಾದ ಘಟನೆ ಮೈಸೂರುನಲ್ಲಿ ನಡೆದಿದೆ.
ಮೈಸೂರಿನ ನಂಜುಮಳಿಗೆಯಲ್ಲಿ ನವೆಂಬರ್ 23ರಂದು ಈ ಘಟನೆ ನಡೆದಿದ್ದು, ಡೋಂಗಿ ಬಾಬಾ ವಿರುದ್ಧ ಇದೀಗ 28 ವರ್ಷದ ಯುವಕ ಅಜ್ಮತ್ ಖಾನ್ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ವಂಚನೆಗೊಳಗಾದ ಯುವಕ ಅಜ್ಮತ್ ಖಾನ್ ವಿಚ್ಛೇಧಿತ ಮಹಿಳೆಯನ್ನು ಪ್ರೀತಿಸುತ್ತಿದ್ದು, ಆಕೆ ತನ್ನನ್ನು ಪ್ರೀತಿಸುವಂತೆ ವಶೀಕರಣ ಮಾಡಿಸಿಕೊಳ್ಳಲು ಬಾಬಾ ಕಬೀರ್ ಖಾನ್ ಎಂಬ ಡೋಂಗಿ ಬಾಬಾನ ಮೊರೆ ಹೋಗಿದ್ದನಂತೆ. ಪತ್ರಿಕೆಯಲ್ಲಿ ಬಂದ ಜಾಹಿರಾತನ್ನು ವೀಕ್ಷಿಸಿದ್ದ ಅಜ್ಮತ್ ಖಾನ್ ಬಾಬ್ ಕಬೀರ್ ಖಾನ್ ನನ್ನು ಬೇಟಿ ಮಾಡಿ ತನ್ನ ವಿಷಯ ತಿಳಿಸಿದ್ದಾನೆ.
ಈ ವೇಳೆ ಡೋಂಗಿ ಬಾಬಾ ಕಬೀರ್ ಖಾನ್ ಮಹಿಳೆ ವಶೀಕರಣ ಮಾಡಲು ವಿಶೇಷ ಪೂಜೆ ಮಾಡಿಕೊಡುತ್ತೇನೆ. ಪೂಜೆಗಾಗಿ ಪಂಚಲೋಹಗಳು ಬೇಕಿದ್ದು, ಇದಕ್ಕಾಗಿ 250 ಗ್ರಾಂ ಚಿನ್ನ, 250 ಗ್ರಾಂ ಬೆಳ್ಳಿ, 250 ಗ್ರಾಂ ತಾಮ್ರ, 250 ಗ್ರಾಂ ಹಿತ್ತಾಳೆ ಹಾಗೂ 250 ಗ್ರಾಂ ಕಬ್ಬಿಣದ ಲೋಹಗಳನ್ನು ತರುವಂತೆ ಹೇಳಿದ್ದಾನೆ. ಡೋಂಗಿ ಬಾಬಾನ ಮಾತು ಕೇಳಿದ ಯುವಕ ಅಜ್ಮತ್ ಖಾನ್ ಅದರಂತೆ ಎಲ್ಲ ಲೋಹಗಳನ್ನು ತಂದಿದ್ದಾನೆ. ಮೈಸೂರಿನ ನಂಜಮಳಿಗೆಯಲ್ಲಿ ಬಾಬಾ ಕಬೀರ್ ಖಾನ್ ನಿವಾಸವಿದ್ದು, ಅಲ್ಲೇ ಪೂಜೆಯನ್ನು ಕೂಡ ಮಾಡಲಾಗಿದೆ. ಪೂಜೆ ವೇಳೆ ಎಲ್ಲ ಲೋಹಗಳನ್ನು ಮಡಿಕೆಯಲ್ಲಿಟ್ಟು ಮುಚ್ಚಳ ಮುಚ್ಚಿ, ಯುವಕ ಅಜ್ಮತ್ ಖಾನ್ ಗೆ ನೀಡಿದ ಡೋಂಗಿ ಬಾಬಾ ಇದನ್ನು ಮನೆಗೆ ಕೊಂಡೊಯ್ಯುವಂತೆ ಹೇಳಿದ್ದಾನೆ. ಅಲ್ಲದೆ ಒಂದು ಗಂಟೆಕಾಲ ಯಾರೊಂದಿಗೂ ಮಾತನಾಡದಂತೆ ಮಾತನಾಡಿದರೆ ಪೂಜೆ ಫಲಿಸಲ್ಲ ಎಂದು ಹೇಳಿದ್ದಾನೆ. ಅಂತೆಯೇ ಒಂದು ಗಂಟೆ ಬಳಿಕ ಮಡಿಕೆ ಮುಚ್ಚಳ ತೆಗೆಯುವಂತೆ ಯುವಕನಿಗೆ ಸೂಚಿಸಿದ್ದಾನೆ.
ಡೋಂಗಿ ಬಾಬಾನಿಂದ ಮಡಿಕೆ ಪಡೆದ ಅಜ್ಮತ್ ಖಾನ್ ಮನೆಗೆ ಬಂದು ಮತ್ತೆ ಬಾಬಾಗೆ ಕರೆ ಮಾಡಿ ಮುಚ್ಚಳ ತೆರೆಯುವ ಕುರಿತು ವಿಚಾರಿಸಿದ್ದಾನೆ. ಆಗ ಬಾಬಾ ಮತ್ತೆ 10 ನಿಮಿಷ ಬಿಟ್ಟು ಮುಚ್ಚಳ ತೆರೆಯುವಂತೆ ಸೂಚಿಸಿದಾಗ ಅನುಮಾನಗೊಂಡ ಯುವಕ ಕೂಡಲೇ ಮುಚ್ಚಳವನ್ನು ತೆಗೆದಿದ್ದಾನೆ. ಆಗ ಬಾಬಾನ ಕೈವಾಡ ಯುವಕನಿಗೆ ತಿಳಿದಿದ್ದು, ಮಡಿಕೆಯಲ್ಲಿದ್ದ ಲೋಹಗಳನ್ನು ಡೋಂಗಿ ಬಾಬಾ ಲಪಟಾಯಿಸಿದ್ದ ವಿಚಾರ ತಿಳಿದಿದೆ. ಕೂಡಲೇ ಬಾಬಾಗೆ ಕರೆ ಮಾಡಿದಾಗ ಆತನ ಮೊಬೈಲ್ ಸ್ವಿಚ್ ಆಫ್ ಬಂದಿತ್ತು. ಆಗ ಬಾಬಾನ ನಿವಾಸವಿದ್ದ ನಂಜುಮಳಿಗೆಗೆ ಅಜ್ಮತ್ ಖಾನ್ ದೌಡಾಯಿಸಿದ್ದು, ಅಷ್ಟು ಹೊತ್ತಿಗಾಗಲೇ ಬಾಬಾ ಅಲ್ಲಿಂದ ಪರಾರಿಯಾಗಿದ್ದು. ಬಳಿಕ ಬೇರೆ ಮಾರ್ಗವಿಲ್ಲದೇ ಪೊಲೀಸ್ ದೂರು ನೀಡಿದ್ದಾನೆ. ಪ್ರಸ್ತುತ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಡೋಂಗಿ ಬಾಬಾ ಕಬೀರ್ ಖಾನ್ ವಿರುದ್ಧ ದೂರು ದಾಖಲಾಗಿದ್ದು, ನಾಪತ್ತೆಯಾಗಿರುವ ಕಬೀರ್ ಖಾನ್ ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Advertisement