2014ರಿಂದ ಕರ್ನಾಟಕದಲ್ಲಿ ಸುಮಾರು 2 ಸಾವಿರ ರೈತರು ಆತ್ಮಹತ್ಯೆ: ಶೇಕಡಾ 14ರಷ್ಟು ಕಾವೇರಿ ಜಲಾನಯನ ಪ್ರದೇಶದವರು

ರಾಜ್ಯ ಕೃಷಿ ಇಲಾಖೆಯಿಂದ ಸಿಕ್ಕಿರುವ ಅಂಕಿಅಂಶ ಪ್ರಕಾರ 2014ರಿಂದ ಇಲ್ಲಿಯವರೆಗೆ ಸಾವಿರದ 903 ರೈತರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯ ಕೃಷಿ ಇಲಾಖೆಯಿಂದ ಸಿಕ್ಕಿರುವ ಅಂಕಿಅಂಶ ಪ್ರಕಾರ 2014ರಿಂದ ಇಲ್ಲಿಯವರೆಗೆ ಸಾವಿರದ 903 ರೈತರು ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2014ರಲ್ಲಿ 122 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ 2015-16ರಲ್ಲಿ ಸಾವಿರದ 461 ಮಂದಿ ರೈತರು ನೇಣಿಗೆ ಶರಣಾಗಿದ್ದಾರೆ. ಈ ವರ್ಷ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ 320 ಮಂದಿ ರೈತರು ಕೊನೆಯುಸಿರೆಳೆದಿದ್ದಾರೆ. 
ಪ್ರಸಕ್ತ ಹಣಕಾಸು ವರ್ಷದಲ್ಲಿ ಈಗಾಗಲೇ ರೈತರ ಆತ್ಮಹತ್ಯೆ ಪ್ರಕರಣ ಹಿಂದಿನ ವರ್ಷಗಳಿಗಿಂತ ಜಾಸ್ತಿಯಾಗಿದೆ. ಅದರಲ್ಲೂ ಕಾವೇರಿ ನೀರನ್ನೇ ನಂಬಿಕೊಂಡಿರುವ ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ 275 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ರಾಜ್ಯದ ಉಳಿದ ಜಿಲ್ಲೆಗಳಿಗಿಂತ ಈ ಭಾಗದಲ್ಲಿ ಶೇಕಡಾ 14ರಷ್ಟು ಹೆಚ್ಚಾಗಿದೆ.
ಬೆಳೆ ನಷ್ಟ, ಬರಗಾಲ, ಖಾಸಗಿ ಲೇವಾದೇವಿಗಾರರಿಂದ ಒತ್ತಡ ರೈತರು ಆತ್ಮಹತ್ಯೆಗೆ ಶರಣಾಗಲು ಮುಖ್ಯ ಕಾರಣವಾಗಿದೆ. ಮಂಡ್ಯ, ಮೈಸೂರು ಭಾಗಗಳಲ್ಲಿ ಕಬ್ಬು ಬೆಳೆಗಾರರು ಇತ್ತೀಚಿನ ವರ್ಷಗಳಲ್ಲಿ ಮೃತಪಟ್ಟಿದ್ದು ಜಾಸ್ತಿ. ಸಕ್ಕರೆ ಬೆಲೆ ಕುಸಿತವೇ ಇದಕ್ಕೆ ಮುಖ್ಯ ಕಾರಣವಾಗಿದೆ.
ರೈತರ ಸಮಸ್ಯೆಗಳಿಗೆ ಇನ್ನಷ್ಟು ಪೆಟ್ಟು ಬಿದ್ದಿದ್ದು ಕಾವೇರಿ ನದಿ ನೀರಿನ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನ ಆದೇಶ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಬರಗಾಲದ ಪರಿಸ್ಥಿತಿ ಎದುರಾಗಿದೆ. ಇದು ರೈತರ ಆತಂಕವನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ. ರಾಜ್ಯದ 68 ತಾಲ್ಲೂಕುಗಳನ್ನು ಈಗಾಗಲೇ ಸರ್ಕಾರ ಬರಗಾಲ ಪೀಡಿತ ಎಂದು ಘೋಷಿಸಿದೆ. 
ಈ ಬಗ್ಗೆ ಕೃಷಿ ಇಲಾಖೆ ಆಯುಕ್ತ ಪಾಂಡುರಂಗ ನಾಯಕ್ ಅವರನ್ನು ಸಂಪರ್ಕಿಸಿದಾಗ, ಕರ್ನಾಟಕ-ತಮಿಳು ನಾಡು ರಾಜ್ಯಗಳ ನಡುವಿನ ಕಾವೇರಿ ವಿವಾದದಿಂದಾಗಿ ಕಾವೇರಿ ನದಿ ಪಾತ್ರದ ಪ್ರದೇಶಗಳು ನೀರಿಲ್ಲದೆ ತೀವ್ರ ಸಮಸ್ಯೆಯನ್ನು ಎದುರಿಸುತ್ತಿವೆ.ಅನೇಕ ಸರ್ಕಾರಿ ಯೋಜನೆಗಳ ಮೂಲಕ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಸಾಧ್ಯವಾದಷ್ಟು ತಡೆಯುತ್ತೇವೆ ಎನ್ನುತ್ತಾರೆ.
ಯೋಜನೆ ಫಲಾನುಭವಿಗಳನ್ನು ತಲುಪುತ್ತಿಲ್ಲ: ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ರೈತರಿಗೆಂದು ಇರುವ ಅನೇಕ ಸರ್ಕಾರದ ಯೋಜನೆಗಳು ನಿಜವಾದ ಫಲಾನುಭವಿಗಳನ್ನು ತಲುಪುತ್ತಿಲ್ಲ. ನೀರಿನ ಕೊರತೆಯಿಂದ ನಾವು ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದೇವೆ. ನಮ್ಮ ಬೆಳೆಗಳು ಬರಗಾಲದಿಂದ ನಾಶಗೊಂಡಿವೆ. ಆದರೆ ರೈತರಿಗೆ ಸಹಾಯ ಮಾಡುವಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರದಿಂದ ಇದೇ ರೀತಿ ಉದಾಸೀನ ಧೋರಣೆ ಮುಂದುವರಿದರೆ ರೈತರ ಆತ್ಮಹತ್ಯೆ ಇನ್ನಷ್ಟು ಜಾಸ್ತಿಯಾಗುವ ಸಾಧ್ಯತೆಯಿದೆ. ಅದಕ್ಕೆ ಸರಿಯಾಗಿ ಈಗ ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳು ನಾಡಿಗೆ ಮತ್ತಷ್ಟು ನೀರು ಬಿಡಬೇಕಾಗಿ ಬಂದಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ.
ಹೆಚ್ಚಿನ ಪರಿಹಾರ ಆತ್ಮಹತ್ಯೆಗೆ ಪ್ರಚೋದನೆ: ರೈತರಿಗೆ ಸಾಮಾನ್ಯವಾಗಿ ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಬೆಳೆ ಸಾಲ ದೊರಕುವುದು ಕಷ್ಟವಾಗುತ್ತದೆ. ಹಾಗಾಗಿ ಹೆಚ್ಚಿನ ರೈತರು ಖಾಸಗಿ ಸಾಲದಾತರಿಂದ ಹೆಚ್ಚಿನ ಬಡ್ಡಿಗೆ ಸಾಲ ಪಡೆಯುತ್ತಾರೆ. ಮುಂದೆ ಅದನ್ನು ತೀರಿಸಲು ಸಾಧ್ಯವಾಗುವುದಿಲ್ಲ. ಸತ್ತು ಹೋದರೆ ಸರ್ಕಾರದಿಂದ ಕುಟುಂಬದ ಸದಸ್ಯರಿಗೆ ಪರಿಹಾರ ದೊರಕುತ್ತದೆ ಎಂದ ಭಾವನೆಯಿಂದ ಕೂಡ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಕೃಷಿ ಇಲಾಖೆಯ ಹಿರಿಯ ಅಧಿಕಾರಿ ಹೇಳುತ್ತಾರೆ.
''ರೈತರಿಗಾಗಿ ವೈದ್ಯಕೀಯ ಸೌಲಭ್ಯ, ಬೆಳೆ ವಿಮಾ ಯೋಜನೆ ಮುಂತಾದವುಗಳನ್ನು ಆರಂಭಿಸಿದ್ದೇವೆ. ಕರ್ನಾಟಕ ಸಾಲದಾತರ ಕಾಯ್ದೆ, ಚಿಟ್ ಫಂಡ್ ಕಾಯ್ದೆ ಮತ್ತು ಅತಿಯಾದ ಬಡ್ಡಿ ನಿಷೇಧ ಕಾಯ್ದೆಯಡಿ  ಅಕ್ರಮ ಖಾಸಗಿ ಲೇವಾದೇವಿಗಾರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಆರಭಿಸಿದ್ದೇವೆ. ರೈತರು ಆತ್ಮಹತ್ಯೆಯ ಹಾದಿ ತುಳಿಯದಂತೆ ಅವರ ಮನಸ್ಸು ಪರಿವರ್ತನೆ ಮಾಡಲು ನಾವು ಆಪ್ತ ಸಮಾಲೋಚನೆ ಕೂಡ ನೀಡುತ್ತೇವೆ'' ಎಂದು ಅವರು ವಿವರಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com