ಕಸ ಬೇರ್ಪಡಿಸಿ ಎಂದು ಹೇಳಿದ್ದಕ್ಕೆ ಮಹಿಳೆಯ ಮನೆ ಮುಂದೆ 3 ಲಾರಿ ಕಸ ಸುರಿದ ಬಿಬಿಎಂಪಿ!

ಸ್ಥಳೀಯ ವಾಣಿಜ್ಯ ಮಳಿಗೆಯವರು ಕಸ ಬೇರ್ಪಡಿಸಿ ಹಾಕಬೇಕು ಎಂದು ದನಿ ಎತ್ತಿದ್ದಕ್ಕೆ ಮಹಿಳೆಯೊಬ್ಬರ ಮನೆ ಮುಂದೆ ಬಿಬಿಎಂಪಿ ಪೌರ ಕಾರ್ಮಿಕರು ಮೂರು ಲಾರಿ ಕಸ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸ್ಥಳೀಯ ವಾಣಿಜ್ಯ ಮಳಿಗೆಯವರು ಕಸ ಬೇರ್ಪಡಿಸಿ ಹಾಕಬೇಕು ಎಂದು ದನಿ ಎತ್ತಿದ್ದಕ್ಕೆ ಮಹಿಳೆಯೊಬ್ಬರ ಮನೆ ಮುಂದೆ ಬಿಬಿಎಂಪಿ ಪೌರ ಕಾರ್ಮಿಕರು ಮೂರು ಲಾರಿ ಕಸ ತಂದು ಸುರಿದಿರುವ ಘಟನೆ ಇಂದಿರಾನಗರದಲ್ಲಿ ನಡೆದಿದೆ.
 
ಇಂದಿರಾ ನಗರದ ನಿವಾಸಿ ಸ್ನೇಹಾ ನಂದಿಹಾಳ್‌ ಅವರ ಮನೆ ಮುಂದೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ಕಸ ಸುರಿದಿದ್ದಾರೆ. ಸ್ಥಳೀಯ ವಾಣಿಜ್ಯ ಮಳಿಗೆಗಳ ಮಾಲೀಕರು ಕಸವನ್ನು ಬೇರ್ಪಡಿಸದೇ ನೀಡುವುದರ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಪ್ರತೀಕಾರವಾಗಿ ನನ್ನ ಮನೆ ಮುಂದೆ ಮೂರು ಲಾರಿಗಳಷ್ಟು ಕಸ ಸುರಿಯಲಾಗಿದೆ ಎಂದು ಸ್ನೇಹಾ ಆರೋಪಿಸಿದ್ದಾರೆ.

ಮನೆ ಮುಂದೆ ಕಸ ಹಾಕಿರುವ ಘಟನೆ ಬಗ್ಗೆ  ತಮ್ಮ ಫೇಸ್‌ಬುಕ್‌ ಪುಟದಲ್ಲಿ  ಸ್ನೇಹಾ  ಬರೆದುಕೊಂಡಿದ್ದಾರೆ. ಇಂದಿರಾನಗರ ಪೊಲೀಸ್‌ ಠಾಣೆಗೆ ಈ ಕುರಿತು ದೂರು ನೀಡಿರುವ ಅವರು,

ಬಿಬಿಎಂಪಿ ಕಾರ್ಪೋರೇಟರ್ ಅನಂದ್ ಕುಮಾರ್  ಈ ಕೃತ್ಯ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇಂದಿರಾನಗರದಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವುದರಿಂದ ಈ ಪರಿಸರದ  ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುವುದನ್ನು ನೋಡಿ ಬೇಸತ್ತಿದ್ದೆ.  ಇದನ್ನು ತಪ್ಪಿಸಲು  ಜನರ ತಂಡ ಕಟ್ಟಿಕೊಂಡು ಹೋರಾಟದ ಹಾದಿ ಹಿಡಿದೆ. ಐ ಚೇಂಜ್‌  ಇಂದಿರಾನಗರ್ ಎಂಬ ಸಂಘಟನೆ ಮಾಡಿದೆ,ಇದಕ್ಕೆ ಇಂದಿರಾನಗರ ನಿವಾಸಿಗಳಿಂದ, ಹೋರಾಟಗಾರರಿಂದ, ಅಧಿಕಾರಿಗಳಿಂದ ಹಾಗೂ ಸಚಿವರಿಂದ ಕೂಡಾ ನನಗೆ ಉತ್ತಮ ಬೆಂಬಲವೂ ಸಿಕ್ಕಿತು ಎಂದು ಹೇಳಿಕೊಂಡಿದ್ದಾರೆ.

ವಾಣಿಜ್ಯ ಮಳಿಗೆಗಳು ಹಸಿ ಮತ್ತು ಒಣ ಕಸ ಬೇರ್ಪಡಿಸದೆ ನೀಡುತ್ತಿದ್ದುದರಿಂದ ಕಸ ಸಂಗ್ರಹಿಸುವವರೂ ನಿತ್ಯ ಸಮಸ್ಯೆ ಎದುರಿಸುತ್ತಿದ್ದರು. ವಸತಿ ಬಡಾವಣೆಯ ಕಸ ಸಾಗಿಸಬೇಕಾದ ವಾಹನದ ಬಹುತೇಕ ಜಾಗವನ್ನು ವಾಣಿಜ್ಯ ಕಸ  ಕಬಳಿಸುತ್ತಿತ್ತು. ಅದರಲ್ಲಿ ಹಸಿ ಮತ್ತು ಒಣ ಕಸಗಳು ಬೆರೆತಿರುವುದರಿಂದ ಅದರ ಪುನರ್ಬಳಕೆಯೂ ಸಾಧ್ಯವಾಗುತ್ತಿರಲಿಲ್ಲ. ಇದರ ವಿರುದ್ಧ ಧ್ವನಿ ಎತ್ತಿದ್ದೆ ಎಂದು ಹೇಳಿದ್ದಾರೆ. ಕೇಂದ್ರ ಪೌರ ಕಾರ್ಮಿಕರ ಮುಖಂಡ ಬಾಲ ಎಂಬಾತ ಕರೆ ಮಾಡಿ, ಸುಮಾರು 3.ಸಾವಿರ ಪೌರ ಕಾರ್ಮಿಕರನ್ನು ಕರೆ ತಂದು ನನ್ನ ಮನೆ ಮುಂದೆ ಪ್ರತಿಭಟನೆ ಮಾಡಿಸುವುದಾಗಿ ನನಗೆ ಬೆದರಿಕೆ ಹಾಕಿದ್ದಾರೆ ಎಂದು ಸ್ನೇಹಾ ಆರೋಪಿಸಿದ್ದಾರೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ಪೂರ್ವ ವಿಭಾಗದ ಜಂಟಿ ಆಯುಕ್ತ ಕೆ.ಸಿ.ಯತೀಶ್‌ ಕುಮಾರ್‌, ಇಷ್ಟೊಂದು ಪ್ರಮಾಣದ ಕಸ ಅಲ್ಲಿಗೆ ತಲುಪಿದ್ದು ಹೇಗೆ ಎಂದೇ ಅರ್ಥವಾಗುತ್ತಿಲ್ಲ. ಈ ಕುರಿತು ಪೌರ ಕಾರ್ಮಿಕರು ಹಾಗೂ ಗುತ್ತಿಗೆದಾರರ ಸಭೆಯನ್ನು ಕರೆಯುತ್ತೇನೆ’ ಎಂದು ತಿಳಿಸಿದ್ದಾರೆ.

ಇನ್ನು ಆರೋಪ ನಿರಾಕರಿಸಿರುವ ಕಾರ್ಪೋರೇಟರ್ ಆನಂದ್ ಕುಮಾರ್, ಸ್ನೇಹಾ ಅವರಿಗೆ ನನ್ನ ಮೇಲೆ ರಾಜಕೀಯ ದ್ವೇಷ,ಹೀಗಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರ ಪೌರ ಕಾರ್ಮಿಕರ ಜೊತೆ ತುಂಬಾ ಕ್ರೂರವಾಗಿ ವರ್ತಿಸುತ್ತಾರೆ , ಅವರ ಜಾತಿ ಹೆಸರು ಹೇಳಿ ಕೆಟ್ಟದಾಗಿ ಮಾತನಾಡುತ್ತಾರೆ ಎಂದು ಆನಂದ್ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com