ಆರೋಗ್ಯ ಸೇವೆಗೆ 2018 ಆಂಬ್ಯುಲೆನ್ಸ್ ಗಳು

ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ತ್ವರಿತವಾಗಿ ಆಂಬ್ಯುಲೆನ್ಸ್‌ ಸೇವೆ ಲಭ್ಯವಾಗುವಂತೆ ಮಾಡಲು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ತ್ವರಿತವಾಗಿ ಆಂಬ್ಯುಲೆನ್ಸ್‌ ಸೇವೆ ಲಭ್ಯವಾಗುವಂತೆ ಮಾಡಲು ವಿವಿಧ ಯೋಜನೆ ಅಡಿ ಲಭ್ಯವಿರುವ ಎಲ್ಲಾ 2018 ಆಂಬ್ಯುಲೆನ್ಸ್ ಗಳನ್ನು ಆರೋಗ್ಯ ಕವಚ-108 ಯೋಜನೆ ಅಡಿ ವಿಲೀನಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕುರಿತು ಅಧಿಕೃತ ಆದೇಶ ಕೂಡ ಹೊರಬಿದ್ದಿದೆ. 
ರಾಜ್ಯದ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತುರ್ತು ಸಂದರ್ಭ ನಿರ್ವಹಿಸಲು ಪ್ರತಿ ಗ್ರಾಮೀಣ ಪ್ರದೇಶಗಳಲ್ಲಿ ಆಂಬ್ಯುಲೆನ್ಸ್‌ ದೊರೆಯುವಂತಿರಬೇಕು. ಈ ಪರಿಸ್ಥಿತಿ ನಿರ್ಮಾಣವಾಗಬೇಕಾದರೆ ಹಾಲಿ ಆರೋಗ್ಯ ಕವಚ ಯೋಜನೆ ಅಡಿ ಲಭ್ಯವಿರುವ ವಾಹನಗಳು ಸೇರಿ ಸುಮಾರು 2 ಸಾವಿರ ಆಂಬ್ಯುಲೆನ್ಸ್ ಗಳು ಬೇಕಾಗುತ್ತವೆ. ಹಾಗಾಗಿ ಆರೋಗ್ಯ ಕವಚ 108ರಡಿ ಕಾರ್ಯ ನಿರ್ವಹಿಸುತ್ತಿರುವ 711 ಆಂಬ್ಯುಲೆನ್ಸ್ ಗಳು ಸೇರಿದಂತೆ ವಿವಿಧ ಯೋಜನೆಗಳಡಿ ಲಭ್ಯವಿರುವ ಒಟ್ಟು 2018 ಆಂಬ್ಯುನೆಲ್ಸ್ ಗಳನ್ನು ಆರೋಗ್ಯ ಕವಚ-108ರಡಿ ವಿಲೀನಗೊಳಿಸಲಾಗುತ್ತಿದೆ.
ಆರೋಗ್ಯ ಕವಚ-108 ಸೇವೆಯು ತುರ್ತು ಹಾಗೂ ಅಪಘಾತಗಳ ಸಂದರ್ಭದಲ್ಲಿ ರೋಗಿಗಳು ಅಥವಾ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ಕೊಡುವುದರ ಜೊತೆಗೆ ತುರ್ತಾಗಿ ಆಸ್ಪತ್ರೆಗಳಿಗೆ ದಾಖಲಿಸುವ ಯೋಜನೆಯಾಗಿದೆ. 2008ರ ನವೆಂಬರ್ 1ರಂದು ರಾಜ್ಯ ಸರ್ಕಾರ ಈ ಯೋಜನೆ ಜಾರಿಗೆ ತಂದಿತ್ತು. ಆರೋಗ್ಯ ಕವಚ-108 ಯೋಜನೆಯಡಿ ಪ್ರತಿ 30 ಕಿಲೋ ಮೀಟರ್ ವ್ಯಾಪ್ತಿಗೆ ಒಂದು ಆಂಬ್ಯುಲೆನ್ಸ್ ಇರಬೇಕು ಎಂಬ ನಿಯಮ ಇದೆ. 
ಸರ್ಕಾರವೇ ನಿರ್ವಹಣೆ ಮಾಡಲಿ: ಕಡಿಮೆ ಅಂತರದ ವ್ಯಾಪ್ತಿಯಲ್ಲಿ ಹೆಚ್ಚು ಆಂಬ್ಯುಲೆನ್ಸ್ ಗಳು ಸಾರ್ವಜನಿಕರ ಸೇವೆಗೆ ಸಿಗಬೇಕು ಎಂಬ ಸರ್ಕಾರದ ಉದ್ದೇಶ ಚೆನ್ನಾಗಿದೆ. ಅವುಗಳ ನಿರ್ವಹಣೆಯನ್ನು ಈಗಾಗಲೇ ಆರೋಗ್ಯ ಕವಚ-108 ಆಂಬ್ಯುಲೆನ್ಸ್ ಗಳ ನಿರ್ವಹಣೆ ಮಾಡುತ್ತಿರುವ ಸಂಸ್ಥೆಯೇ ನಿರ್ವಹಣೆ ಮಾಡುವಂತಾದರೆ ಮತ್ತಷ್ಟು ಗೊಂದಲಗಳು ಹುಟ್ಟಿಕೊಳ್ಳುತ್ತವೆ.ಹಾಗಾಗಿ ಎಲ್ಲ ಆರೋಗ್ಯ ಕವಚ-108ರಡಿ ವಿಲೀನಗೊಳಿಸುವ ಯೋಜನೆಯನ್ನು ಸರ್ಕಾರವೇ ನಿರ್ವಹಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಆರೋಗ್ಯ ಕವಚ (108) ಆಂಬ್ಯುಲೆನ್ಸ್‌ ನೌಕರರ ಸಂಘ ಒತ್ತಾಯಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com