ಕೃಷ್ಣ ಮಠಕ್ಕೆ ಮುತ್ತಿಗೆ ಹಾಕಿದರೆ ಅನಿರ್ಧಿಷ್ಟಾವಧಿ ಉಪವಾಸ ಮಾಡ್ತೀನಿ: ಪೇಜಾವರ ಶ್ರೀ

ಶ್ರೀಕೃಷ್ಣ ಮಠಕ್ಕೆ ಮುತ್ತಿಗೆ ಹಾಕಿದರೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡುತ್ತೇನೆಂದು ಪೇಜಾವರ ಮಠದ ವಿಶ್ವಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ...
ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ
ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ

ಉಡುಪಿ: ಶ್ರೀಕೃಷ್ಣ ಮಠಕ್ಕೆ ಮುತ್ತಿಗೆ ಹಾಕಿದರೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡುತ್ತೇನೆಂದು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ಉಡುಪಿ ಚಲೋ ಸಮಾವೇಶದಲ್ಲಿ ಕೆಲವರು ಶ್ರೀ ಕೃಷ್ಣ ಮಠಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿದ್ದಾರೆ. ಮಠಕ್ಕೆ ರಕ್ಷಣೆ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಗೋರಕ್ಷಕರಿಂದ ಆಗುತ್ತಿರುವ ಹಿಂಸಾಚಾರವನ್ನು ವಿರೋಧಿಸಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಆದರೆ, ಆ ಸಮಾವೇಶದಲ್ಲಿ ಅನಾವಶ್ಯಕವಾಗಿ ಮಠದ ವಿಚಾರವನ್ನು ಎಳೆಯಲಾಗಿದೆ. ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ನಡೆಸುತ್ತಿರುವುದಕ್ಕೆ ಈಗಾಗಲೇ ನಮ್ಮ ವಿರೋಧವಿದೆ ಎಂದು ಹೇಳಿದ್ದಾರೆ.

ಪೇಜಾವರ ಶ್ರೀಗಳ ಮಿದುಳನ್ನು ಸ್ವಚ್ಛಗೊಳಿಸಬೇಕೆಂದು ಈ ಹಿಂದೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಅವರು ಹೇಳಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಲಿಂಗ ದೀಕ್ಷೆ ಪಡೆಯದವರ ಜೊತೆ ಭೋಜನ ಮಾಡುವುದು ಏಳು ಜನ್ಮಗಳ ನರಕಕ್ಕೆ ಕಾರಣ ಆಗುತ್ತದೆ ಎಂದು ಬಸವಣ್ಣನವರು ಹೇಳಿದ್ದರು. ಅದಕ್ಕೆ ಸಂಬಂಧಿಸಿದ ವಚನವನ್ನೂ ಉದಾಹರಣೆ ನೀಡಬಲ್ಲೆ. ಹಾಗಿದ್ದರೆ ಬಸವಣ್ಣನವರ ಮಿದುಳನ್ನು ಅಮಿನ್ ಮಟ್ಟು ಸ್ವಚ್ಛಗೊಳಿಸುವರೇ? ಎಂದು ಪ್ರಶ್ನಿಸಿದ್ದಾರೆ.

ಉಡುಪಿಯಲ್ಲಿರುವ ಮಠದಲ್ಲಿ ದಲಿತರು, ಹಿಂದುಳಿದವರು ಮತ್ತು ಬ್ರಾಹ್ಮಣರು ಎಲ್ಲರೂ ಒಂದೇ ಪಂಕ್ತಿಯಲ್ಲಿ ಭೋಜನವನ್ನು ಮಾಡುತ್ತಿದ್ದಾರೆ. ಕೆಲ ಸಂಪ್ರದಾಯವಾದಿ ಬ್ರಾಹ್ಮಣರ ಅಪೇಕ್ಷೆಗೆ ಅನುಸಾರ ಅವರಿಗೆ ಮಾತ್ರ ಪ್ರತ್ಯೇಕ ಭೋಜನ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಕೇವಲ ನಮ್ಮ ಮಠದಲ್ಲಿಯೇ ಅಲ್ಲ ಧರ್ಮಸ್ಥಳ, ಶೃಂಗೇರಿ ಹಾಗೂ ಸುಬ್ರಹ್ಮಣ್ಯದಲ್ಲಿಯೂ ಈ ರೀತಿಯ ವ್ಯವಸ್ಥೆಯಿದೆ. ಆದರೆ, ಶ್ರೀಕೃಷ್ಣ ಮಠದ ಮೇಲೆ ಮಾತ್ರ ಆಕ್ಷೇಪವೇಕೆ ಎಂದು ಕೇಳಿದರು.

ಕೆಲ ಬುದ್ಧಿಜೀವಿಗಳು ಕೋಮುಸೌಹಾರ್ದದ ಹೆಸರಿನಲ್ಲಿ ದಲಿತರು, ಮುಸ್ಲಿಮರನ್ನು ಬ್ರಾಹ್ಮಣರ ಮೇಲೆ ಎತ್ತಿಕಟ್ಟುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ದಲಿತರು ಹಾಗೂ ಬ್ರಾಹ್ಮಣರು ಒಂದುಗೂಡಿದರೆ ಹಿಂದೂ ಧರ್ಮ ಮತ್ತಷ್ಟು ಗಟ್ಟಿಯಾಗುತ್ತದೆ ಎಂಬ ಕಾರಣಕ್ಕೆ ಈ ರೀತಿಯಾಗಿ ಮಾಡುತ್ತಿದ್ದಾರೆ.

ಅಸ್ಪೃಶ್ಯತೆ ನಿವಾರಣೆಗೆ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದ್ದೇನೆ. ದಲಿತರಿರುವ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿರುವ ಭಕ್ತರು ಪ್ರೀತಿಯಿಂದ ಪಾದ ತೊಳೆಯುತ್ತಾರೆ ಇದರಲ್ಲಿ ತಪ್ಪೇನಿದೆ? ವಿಶ್ವ ಹಿಂದೂ ಪರಿಷತ್ ಕೂಡ ದಲಿತ ವಿರೋಧಿಯಲ್ಲ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com