ಉಕ್ಕಿನ ಸೇತುವೆ ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಸಿದ್ದರಾಮಯ್ಯ

ಉಕ್ಕಿನ ಸೇತುವೆ ಯೋಜನೆಯಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ, ಸರ್ಕಾರದ ನಿಲುವು ಎಂದಿಗೂ ಬದಲಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಉಕ್ಕಿನ ಸೇತುವೆ ಯೋಜನೆಯಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ, ಸರ್ಕಾರದ ನಿಲುವು ಎಂದಿಗೂ ಬದಲಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

 ಉಕ್ಕಿನ ಸೇತುವೆ ನಿರ್ಮಾಣಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಅವರು, ಬಸವೇಶ್ವರ ವೃತ್ತದಿಂದ ಹೆಬ್ಬಾಳ ಮೇಲ್ಸೇತುವೆ ವರೆಗೂ ನಿರ್ಮಿಸುತ್ತಿರುವ ಉಕ್ಕಿನ ಸೇತುವೆಗೆ ಈಗಾಗಲೇ ಗುತ್ತಿಗೆ ನೀಡಲಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಯೋಜನೆಯನ್ನು ಮೊಟಕುಗೊಳಿಸುವುದಿಲ್ಲ. ಸೇತುವೆ ಕುರಿತ ನಮ್ಮ ನಿರ್ಧಾರ ಬದಲಾಗುವುದಿಲ್ಲ ಎಂದು ಹೇಳಿದ್ದಾರೆ.

ಸಂಚಾರ ದಟ್ಟಣೆ ವಿರಳಗೊಳಿಸಲು ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಉಕ್ಕಿನ ಸೇತುವೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ತಲುಪುವ ಪರ್ಯಾಯ ರಸ್ತೆಗಳ ವೀಕ್ಷಣೆಗೆ ಹೋಗಿರಲಿಲ್ಲ. ಕಳದ ಜೂನ್ ತಿಂಗಳಿನಲ್ಲೇ ಭೇಟಿ ನೀಡಿ ಪರಿಶೀಲನೆ ಕೈಗೊಳ್ಳಬೇಕಿತ್ತು. ಆದರೆ, ಸಚಿವ ಕೃಷ್ಣಭೈರೇಗೌಡರಿಗೆ ಸಮಯವಾಗದ ಕಾರಣ ಸೋಮವಾರ ಪರಿಶೀಲನೆ ಕೈಗೊಂಡಿದ್ದೇನೆಂದು ತಿಳಿಸಿದ್ದಾರೆ.

ಸರ್ಕಾರ ಉದ್ದೇಶಿಸಿರುವ ಉಕ್ಕಿನ ಸೇತುವೆ ಯೋಜನೆ ಸಂಪೂರ್ಣ ಪಾರದರ್ಶವಾಗಿದ್ದು, ಜನರು ಈ ಬಗ್ಗೆ ಅನುಮಾನ ಪಡಬೇಕಿಲ್ಲ. ಸಾರ್ವಜನಿಕರ ಅಭಿಪ್ರಾಯ ಗಮನದಲ್ಲಿಟ್ಟುಕೊಂಡೇ ಯೋಜನೆಯನ್ನು ರೂಪಿಸಲಾಗಿದೆ. ಬಿಡಿಎ ವೆಬ್ ಸೈಟ್ ಗೆ ಸಾರ್ವಜನಿಕರು ಕಳುಹಿಸಿದ್ದ ಶೇ.73ರಷ್ಟು ಪ್ರತಿಕ್ರಿಯೆಗಳಲ್ಲಿ ಯೋಜನೆ ಪರವಾದ ಅಭಿಪ್ರಾಯಗಳೇ ವ್ಯಕ್ತವಾಗಿವೆ.

ಸೇತುವೆ ಯೋಜನೆ ಕಾಂಗ್ರೆಸ್ ಸರ್ಕಾರ ರೂಪಿಸಿದ ಯೋಜನೆಯಲ್ಲ. 2010ರಲ್ಲಿಯೇ ಅಂದಿನ ಸರ್ಕಾರ ಯೋಜನೆಯನ್ನು ಬಿಡಿಎ ವಶಕ್ಕೆ ನೀಡಿದೆ. ವಿರೋಧ ವ್ಯಕ್ತಪಡಿಸಬೇಕೆಂಬ ಉದ್ದೇಶದಿಂದ ಬಿಜೆಪಿಯವರು ರಾಜಕೀಯ ಪ್ರೇರಿತ ಹೇಳಿಕೆ ನೀಡುವುದು ಸರಿಯಲ್ಲ. ಅವರದ್ದೇ ಕೂಸನ್ನು ನಾವು ಬೆಳೆಸುತ್ತಿದ್ದೇವೆ ಅಷ್ಟೇ. 2014-15ನೇ ಸಾಲಿನ ಬಜೆಟ್ ನಲ್ಲಿ ಕೂಡ ಯೋಜನೆಯನ್ನು ಘೋಷಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com