ತೆರೆದ ಹಾಸನಾಂಬೆ ಬಾಗಿಲು: ಭಕ್ತರ ಜೊತೆ ಕ್ಯೂನಲ್ಲಿ ದರ್ಶನ ಪಡೆದ ಜೆಡಿಎಸ್ ನಾಯಕರು

ವರ್ಷಕ್ಕೊಮ್ಮೆಯಷ್ಟೇ ದರ್ಶನ ಭಾಗ್ಯ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನೋತ್ಸವ ಗುರುವಾರ ಜಿಲ್ಲಾಡಳಿತದ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ...
ಹಾಸನಾಂಬೆ ದೇವಾಲಯ
ಹಾಸನಾಂಬೆ ದೇವಾಲಯ

ಹಾಸನ: ವರ್ಷಕ್ಕೊಮ್ಮೆಯಷ್ಟೇ ದರ್ಶನ ಭಾಗ್ಯ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನೋತ್ಸವ ಗುರುವಾರ ಜಿಲ್ಲಾಡಳಿತದ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಬಾಗಿಲು ತೆರೆಯುವ ಮೂಲಕ ಪ್ರಾರಂಭವಾಯ್ತು.

ಗುರುವಾರ ಮಧ್ಯಾಹ್ನ 12.30ಕ್ಕೆ ಪೂಜಾ ವಿಧಿವಿಧಾನಗಳಿಂದ ಬಾಗಿಲು ತೆರೆಯಲಾಯಿತು. ಆಶ್ವಿಜಾ ಮಾಸದ ಪೂರ್ಣಿಮೆಯ ನಂತರ ಬರುವ ಮೊದಲ ಗುರುವಾರವಾದ ಇಂದು ಬಾಗಿಲು ತೆರೆಯಲಾಯ್ತು.

ಆದರೆ ಜೆಡಿಎಸ್ ಯಾವುದೇ ಜನಪ್ರತಿನಿಧಿಗಳು ಈ ಬಾರಿ ಭಾಗವಹಿಸಿರಲಿಲ್ಲ. ಮಾಜಿ ಸಚಿವ ಎಚ್.ಡಿ ರೇವಣ್ಣ, ಶಾಸಕ ಎಚ್ ಎಸ್ ಪ್ರಕಾಶ್, ಹಾಗೂ ಮೇಯರ್ ಎಚ್ ಎಸ್ ಅನಿಲ್ ಕುಮಾರ್ ಬಾಗಿಲು ತೆರೆಯುವ ವೇಳೆ ಹಾಜರಿರಲಿಲ್ಲ. ನಂತರ ಮಧ್ಯಾಹ್ನ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.

ಶುಕ್ರವಾರ ಬೆಳಗ್ಗೆ ದೇವಾಲಯಕ್ಕೆ ಬಂದ ಶಾಸಕ ಎಚ್.ಡಿ ರೇವಣ್ಣ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ನಿನ್ನೆ ದೇವಾಲಯದ ಬಾಗಿಲು ತೆರಿಯುವ ವೇಳೆ ಏಕೆ ಹಾಜರಿರಲಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮನ್ನು ಯಾರು ಆಹ್ವಾನಿಸಿರಲಿಲ್ಲ ಎಂದು ಹೇಳಿದ್ದಾರೆ.

ಮುಖ್ಯ ಪುರೋಹಿತ ನಾಗರಾಜ ಮತ್ತು ಭಟ್ ಗರ್ಭಗುಡಿಯಲ್ಲಿ ದೇವಿಯ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು. ಅರಸು ಮನೆತನದ ನರಸಿಂಹರಾಜೇ ಅರಸು ಬಾಳೇಗಿಡ ಕಡಿಯುವ ಮೂಲಕ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಟ್ರು. ಈ ಬಾರಿ 13 ದಿನ ದರ್ಶನ ನೀಡೋ ದೇವಿ ಸಾರ್ವಜನಿಕರಿಗೆ 11 ದಿನ ಮಾತ್ರ ದರ್ಶನ ಭಾಗ್ಯ ಕರುಣಿಸುತ್ತಾಳೆ. ಉಳಿದಂತೆ ಮೊದಲ ಮತ್ತು ಕೊನೆಯ ದಿನ ದೇವಿಯ ಅಲಂಕಾರಕ್ಕೆ ಸೀಮಿತವಾಗಿರುತ್ತದೆ.

ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ, ಶಾಸಕ ಗೋಪಾಲಸ್ವಾಮಿ ಸೇರಿದಂತೆ ಹಿರಿಯ ಅಧಿಕಾರಿಗಲು ಈ ವೇಳೆ ಹಾಜರಿದ್ದರು.

ಪ್ರತಿ ವರ್ಷ ಹಾಸನಾಂಬೆ ದೇಗುಲದ ಬಾಗಿಲು ಮುಚ್ಚುವ ಮುನ್ನ ದೇವಿಯ ಎದುರು ಹಚ್ಚಿದ ಮಹಾದೀಪ ಸತತ ಒಂದು ವರ್ಷಗಳ ಕಾಲ ಉರಿಯುತ್ತಲೇ ಇರುತ್ತದೆ. ಇದು ಈ ತಾಯಿಯ ಒಂದು ಪವಾಡ ಎಂತಲೇ ಹೇಳಬಹುದು. ತಾಯಿ ತಲೆಯ ಮೇಲಿಟ್ಟ ಹೂ ಕೂಡಾ ಬಾಡಿರುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com