
ಮಂಡ್ಯ: ತಮಿಳುನಾಡು ರಾಜ್ಯಕ್ಕೆ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿ ಕಾವೇರಿ ಹಿತರಕ್ಷಣಾ ಸಮಿತಿ ಮಂಗಳವಾರ ಮಂಡ್ಯ ಜಿಲ್ಲೆ ಬಂದ್ ಗೆ ಕರೆ ನೀಡಿದೆ.
ಸುಪ್ರೀಂ ಕೋರ್ಟ್ ತೀರ್ಪು ಬೆನ್ನಲ್ಲೇ ಇಂದು ಮಂಡ್ಯದಲ್ಲಿ ಸಭೆ ನಡೆಸಿದ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ ಮಾದೇಗೌಡ ಅವರು, ತೀರ್ಪು ವಿರೋಧಿಸಿ ಮಂಗಳವಾರ ಬಂದ್ ಗೆ ಕರೆ ನೀಡಿರುವುದಾಗಿ ತಿಳಿಸಿದರು.
ಇಂದು ನಡೆದ ಸಭೆಯಲ್ಲಿ ನಾಳೆಯ ಬಂದ್ ಕುರಿತಂತೆ ಸಮಾಲೋಚನೆ ನಡೆಸಲಾಗಿದ್ದು, ಮೈಸೂರು-ಮಂಡ್ಯ ಹೆದ್ದಾರಿ ಬಂದ್ ಗೆ ನಿರ್ಣಯ ಕೈಗೊಳ್ಳಲಾಗಿದೆ. ಹೀಗಾಗಿ ಪರ್ಯಾಯ ಮಾರ್ಗ ಬಳಕೆ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಶಾಲಾ-ಕಾಲೇಜುಗಳಿಗೆ ರಜೆಘೋಷಣೆ, ರೈತ ಹೋರಾಟ ಸೇರಿದಂತೆ ಹಲವು ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಅಂತೆಯೇ ಸಭೆಯಲ್ಲಿ ಕಾವೇರಿ ಹಿತರಕ್ಷಣಾ ಸಮಿತಿ ವತಿಯಿಂದ ನಾಲ್ಕು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡದಂತೆ ಸರ್ಕಾರಕ್ಕೆ ಆಗ್ರಹಿಸಲಾಗಿದೆ.
ಕಾವೇರಿ ಹಿತರಕ್ಷಣಾ ಸಮಿತಿ ಕೈಗೊಂಡ ನಾಲ್ಕು ನಿರ್ಣಯಗಳು.
1.ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡದಂತೆ ಸರ್ಕಾರಕ್ಕೆ ಆಗ್ರಹ
2.ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಮರು ಪರಿಶೀಲಿಸುವಂತೆ ಮರು ಪರಿಶೀಲನಾ ಅರ್ಜಿಯನ್ನು ಸರ್ಕಾರ ಸಲ್ಲಿಸಬೇಕು.
3.ಕೇವಲ ಕಾವೇರಿ ಕೊಳ್ಳದ ಮಂದಿ ಮಾತ್ರವಲ್ಲದೇ ಬೆಂಗಳೂರಿಗರೂ ಕೂಡ ಕಾವೇರಿ ಪ್ರತಿಭಟನೆಗೆ ಧುಮುಕಬೇಕು.
4.ಎಲ್ಲ ಪಕ್ಷಗಳ ಜಿಲ್ಲಾ ಅಧ್ಯಕ್ಷರು ತಮ್ಮ ಪಕ್ಷದ ರಾಜ್ಯಧ್ಯಕ್ಷರುಗಳಿಗೆ ಕೂಡಲೇ ಪತ್ರ ಬರೆದು ಕಾವೇರಿ ಹೋರಾಟಕ್ಕೆ ಧುಮುಕವಂತೆ ಕಾರ್ಯಕರ್ತರಿಗೆ ಕರೆ ನೀಡಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಸಚಿವ ಎಂಬಿ ಪಾಟೀಲ್ ತರಾಟೆಗೆ ತೆಗೆದುಕೊಂಡ ಮಾದೇಗೌಡ
ಇದಕ್ಕೂ ಮೊದಲು ಸಚಿವ ಎಂಬಿ ಪಾಟೀಲ್ ಗೆ ಕರೆ ಮಾಡಿದ್ದ ಜಿ ಮಾದೇಗೌಡ ಅವರು ಸಚಿವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾವೇರಿ ವಿಚಾರವಾಗಿ ರಾಜ್ಯದ ವಾದದ ಕುರಿತು ಮಾಹಿತಿ ಪಡೆದ ಮಾದೇಗೌಡ ಅವರು ತೀರ್ಪಿನ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕೋರ್ಟ್ ತೀರ್ಪನ್ನು ಪಾಲಿಸಬೇಕಾಗುತ್ತದೆ ಎಂಬ ಸಚಿವರ ಉತ್ತರದಿಂದ ಕೆಂಡಾಮಂಡಲರಾದ ಮಾದೇಗೌಡ ಅವರು ಸಚಿವರನ್ನು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement