
ಮಂಡ್ಯ: ರೈತರ ತೀವ್ರ ಪ್ರತಿಭಟನೆಯ ಹೊರತಾಗಿಯೂ ತಮಿಳುನಾಡಿಗೆ ಮಂಗಳವಾರ ರಾತ್ರಿಯಿಂದ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಕಾವೇರಿ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಂಸದ ಜಿ ಮಾದೇಗೌಡ ಕಟು ಶಬ್ದಗಳಿಂದ ಖಂಡಿಸಿದ್ದಾರೆ.
ತಮ್ಮ ಸ್ವಗೃಹದಲ್ಲಿ ಮಾತನಾಡಿದ ಜಿ ಮಾದೇಗೌಡ ಅವರು ತಮಿಳುನಾಡಿಗೆ ನೀರು ಬಿಡಲು ಸೂಚನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ತಮಿಳುನಾಡಿಗೆ ನೀರು ಬಿಟ್ಟ ವಿಚಾರವನ್ನು ಖಂಡಿಸಿರುವ ಮಾದೇಗೌಡ ಅವರು, ಸರ್ವಪಕ್ಷ ಸಭೆ ನಡೆಸಿ ನಿರ್ಧಾರ ಮಾಡುವ ಮೂಲಕ ಸಿದ್ದರಾಮಯ್ಯ ಅವರು ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಆರ್ ಎಸ್ ಗೆ ಮುತ್ತಿಗೆಗೆ ಸಿದ್ಧ; ಮಿಲಿಟರಿಯಿಂದ ತಡೆಯಲು ಯತ್ನಿಸಿದರೆ, ನಮ್ಮದೇ ಮಿಲಿಟರಿ ಕಟ್ಟುತ್ತೇವೆ
ಇದೇ ವೇಳೆ ಕೆಆರ್ ಎಸ್ ಜಲಾಶಯಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿದ ಮಾದೇಗೌಡ ಅವರು, ಸರ್ಕಾರ ರೈತರ ಹೋರಾಟದ ಭಯದಿಂದಾಗಿ ಜಲಾಶಯಕ್ಕೆ ಮಿಲಿಟರಿ ಭದ್ರತೆ ಒದಗಿಸಿದ್ದಾರೆ. ಅವರು ನಮ್ಮನ್ನು ಮಿಲಿಟರಿಯಿಂದ ತಡೆಯಲು ಯತ್ನಿಸಿದರೆ ನಾವೇ ನಮ್ಮದೇ ಮಿಲಿಟರಿ ಕಟ್ಟಿ ಜಲಾಶಯದಿಂದ ನೀರು ಹರಿಯುವುದನ್ನು ತಡೆಯುತ್ತೇವೆ. ಸರ್ಕಾರ ರೈತರ ಮೇಲೆ ಲಾಠಿ ಚಾರ್ಜ್ ನಡೆಸಿದರೂ ನಾವು ಜಗ್ಗುವುದಿಲ್ಲ. ಕಾವೇರಿ ವಿಚಾರವಾಗಿ ಈಗಾಗಲೇ ಹಲವು ಬಾರಿ ಜೈಲು ಕಂಡಿದ್ದೇವೆ. ಲಾಠಿ ಏಟಾಗಲೀ ಅಥವಾ ಜೈಲು ಶಿಕ್ಷೆಯಿಂದಾಗಿ ಸರ್ಕಾರ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ಕಾವೇರಿಗಾಗಿ ನಾವು ಜೈಲಿಗೆ ಹೋಗಲೂ ಸಿದ್ಧ, ಲಾಠಿ ಏಟು ತಿನ್ನಲೂ ಸಿದ್ಧ. ಯಾವುದೇ ಕಾರಣಕ್ಕೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಹೋರಾಟಕ್ಕೆ ಬೆಂಬಲ ನೀಡದಿದ್ದರೆ ಬೆಂಗಳೂರಿಗೂ ನೀರು ಬಿಡುವುದಿಲ್ಲ
ಕಾವೇರಿ ವಿಚಾರವಾಗಿ ರೈತರ ಹೋರಾಟಕ್ಕೆ ಬೆಂಬಲ ನೀಡದ ಬೆಂಗಳೂರಿಗರ ವಿರುದ್ಧ ಕಿಡಿ ಕಾರಿದ ಮಾದೇಗೌಡ ಅವರು ಈ ಬಾರಿ ರೈತರ ಹೋರಾಟಕ್ಕೆ ಬೆಂಗಳೂರಿಗರು ಬೆಂಬಲ ನೀಡದಿದ್ದರೆ, ಬೆಂಗಳೂರಿಗೆ ಹರಿಯುವ ನೀರನ್ನು ಸ್ಥಗಿತಗೊಳಿಸುತ್ತೇವೆ ಎಂದು ಹೇಳಿದರು.
Advertisement