
ಮಂಡ್ಯ: ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿದ ವಿಚಾರದ ಹಿನ್ನಲೆಯಲ್ಲಿ ಭಾನುವಾರ ನಡೆದ ಕಾವೇರಿ ಹಿತರಕ್ಷಣಾ ಸಮಿತಿ ಸಭೆ ಅಂತ್ಯವಾಗಿದ್ದು, ಸಭೆಯಲ್ಲಿ ಐದು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಮಂಡ್ಯದ ಪ್ರವಾಸಿ ಮಂದಿರದಲ್ಲಿ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡ ಅವರ ನೇತೃತ್ವದಲ್ಲಿ ಸಭೆ ನಡೆದಿದ್ದು, ಕರ್ನಾಟಕಕ್ಕೇ ಕಾವೇರಿ ನದಿ ನೀರು ಉಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಯಿತು. ಸುಮಾರು ಒಂದು ಗಂಟೆ ಕಾಲ ನಡೆದ ಸಭೆ ಇದೀಗ ಮುಕ್ತಾಯವಾಗಿದ್ದು, ಸಭೆಯಲ್ಲಿ ಕಾವೇರಿ ನದಿ ನೀರು ವಿವಾದ ಸಂಬಂಧ ಐದು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಪ್ರಮುಖವಾಗಿ ತತ್ ಕ್ಷಣದಿಂದಲೇ ತಮಿಳುನಾಡಿಗೆ ಹರಿಸಲಾಗುತ್ತಿರುವ ನೀರನ್ನು ನಿಲ್ಲಿಸಬೇಕು ಎನ್ನುವುದು ಕಾವೇರಿ ಹಿತರಕ್ಷಣಾ ಸಮಿತಿಯ ಮೊದಲ ನಿರ್ಣಯವಾಗಿದ್ದು, ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಕಾವೇರಿ ಮೇಲುಸ್ತುವಾರಿ ಸಮಿತಿಗೆ ಅರ್ಜಿ ಸಲ್ಲಿಸಿ ಸಮರ್ಥ ವಾದ ಮಂಡಿಸಬೇಕು ಎನ್ನುವುದು ಎರಡನೇ ನಿರ್ಣಯವಾಗಿದೆ. ಅಂತೆಯೇ ಇದೇ ಸೆಪ್ಟೆಂಬರ್ 14ರಂದು ಅಂದರೆ ಇದೇ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಪಕ್ಷಗಳ ಶಾಸಕರ ಸಭೆ ಕರೆಯಬೇಕು ಮತ್ತು ಈ ಸಭೆಗೆ ಬೆಂಗಳೂರಿನ ಶಾಸಕರೂ ಸೇರಿದಂತೆ ಎಲ್ಲ ಶಾಸಕರೂ ಹಾಜರಾಗಬೇಕು. ಪ್ರಮುಖವಾಗಿ ಕಾವೇರಿ ಕಣಿವೆ ಭಾಗದ ಶಾಸಕರು ಕಡ್ಡಾಯವಾಗಿ ಸಭೆ ಹಾಜರಾಗಬೇಕು ಎಂದು ಸಮಿತಿ ಆಗ್ರಹಿಸಿದೆ.
ಇದಲ್ಲದೆ ಪ್ರಸ್ತುತ ತಮಿಳುನಾಡಿಗೆ ಸರ್ಕಾರ ನೀರು ಬಿಟ್ಟಿರುವುದರಿಂದ ಕಾವೇರಿ ಕಣಿವೆ ಭಾಗದ ರೈತರಿಗೆ ತೊಂದರೆಯಾಗಿದ್ದು, ಇದಕ್ಕಾಗಿ ಸರ್ಕಾರ ಕಾವೇರಿ ಕಣಿವೆ ಭಾಗದ ರೈತರಿಗೆ ಪ್ರತೀ ಎಕರೆಗೆ 25 ಸಾವಿರ ರು.ಗಳಂತೆ ಪರಿಹಾರ ಧನ ನೀಡಬೇಕು ಎಂದು ಹೇಳಿದ್ದಾರೆ. ಇದಲ್ಲದೆ ಮಂಡ್ಯ ಸೇರಿದಂತೆ ರಾಜ್ಯದ ವಿವಿಧೆಡೆ ಕಾವೇರಿ ನೀರಿಗಾಗಿ ಹೋರಾಟ ನಡೆಸಿದ ಎಲ್ಲ ಹೋರಾಟಗಾರರ ವಿರುದ್ಧದ ಎಲ್ಲ ಕೇಸ್ ಗಳನ್ನು ಸರ್ಕಾರ ಕೈಬಿಟ್ಟು, ಬಂಧಿತ ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡುವಂತೆ ಜಿ ಮಾದೇಗೌಡ ನೇತೃತ್ವದ ಕಾವೇರಿ ಹಿತರಕ್ಷಣಾ ಸಮಿತಿ ನಿರ್ಣಯ ಕೈಗೊಂಡಿದೆ.
ಒಟ್ಟಾರೆ ದಿನಗಳೆದಂತೆ ಕಾವೇರಿ ಹೋರಾಟ ತಾರಕಕ್ಕೇರುತ್ತಿದ್ದು, ತಮಿಳುನಾಡಿಗೆ ನೀರು ಬಿಟ್ಟ ವಿಚಾರ ಇದೀಗ ಸರ್ಕಾರ ಹಾಗೂ ರಾಜ್ಯ ರೈತರ ನಡುವಿನ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದೆ.
Advertisement