ಮನ್ರೇಗಾ ತಾಂತ್ರಿಕ ಅಧಿಕಾರಿಯ ಕೈಕಡಿದ ಗುತ್ತಿಗೆದಾರರು

ಗುತ್ತಿಗೆದಾರರು ಮನ್ರೇಗಾ ತಾಂತ್ರಿಕ ಅಧಿಕಾರಿಯೊಬ್ಬರ ಬಲಗೈ ಕಡಿದಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ತಲೆಕೆರೆ ಹ್ಯಾಂಡ್ ಪೋಸ್ಟ್ ನಲ್ಲಿ ಸೋಮವಾರ ನಡೆದಿದ್ದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತುಮಕೂರು: ಗುತ್ತಿಗೆದಾರರು ಮನ್ರೇಗಾ ತಾಂತ್ರಿಕ ಅಧಿಕಾರಿಯೊಬ್ಬರ ಬಲಗೈ ಕಡಿದಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ತಲೆಕೆರೆ ಹ್ಯಾಂಡ್ ಪೋಸ್ಟ್ ನಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಶ್ರೀನಿವಾಸ್ ಅವರು ಮನ್ರೇಗಾ ಯೋಜನೆಯ ತಾಂತ್ರಿಕ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಕೇಶವ ಮತ್ತು ಮಂಜುನಾಥ್ ಆರೋಪಿಗಳಾಗಿದ್ದು, ಕೆಲಸ ವಿಚಾರದಲ್ಲಿ ಶ್ರೀನಿವಾಸ್ ಅವರೊಂದಿಗೆ ವೈಮನಸ್ಸನ್ನು ಹೊಂದಿದ್ದರು. ಇದರಂತೆ ಶ್ರೀನಿವಾಸ್ ಅವರು ಸೋಮವಾರ ಮಾಗಡಿ ಟೌನ್ ನಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದ ವೇಳೆ ಆರೋಪಿಗಳು ದಾಳಿ ಮಾಡಿ ಕೈ ಕತ್ತರಿಸಿದ್ದಾರೆಂದು ತಿಳಿದುಬಂದಿದೆ.

ಮಂಜುನಾಥ್ ಮತ್ತು ಕೇಶವ ಇಬ್ಬರು ಮನ್ರೇಗಾದಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದು, ಕುಣಿಗಲ್ ತಾಲೂಕಿನ ಚಿಕ್ಕಹೊನ್ನಯ್ಯನಪಾಳ್ಯ ಗ್ರಾಮದಲ್ಲಿ ಮನ್ರೇಗಾ ಯೋಜನೆಯಡಿಯಲ್ಲಿ ಕೆಲ ಕಾರ್ಯಗಳನ್ನು ಪೂರ್ಣಗೊಳಿಸಿದ್ದರು. ಆದರೆ, ಕೆಲಸಕ್ಕೆ ಪ್ರಮಾಣಪತ್ರ ಅಗತ್ಯವಿದ್ದ ಹಿನ್ನೆಲೆಯಲ್ಲಿ ಪ್ರಮಾಣಪತ್ರ ನೀಡುವಂತೆ ಇಬ್ಬರೂ ಶ್ರೀನಿವಾಸ್ ಅವರೊಂದಿಗೆ ಮಾತುಕತೆ ನಡೆಸಿದ್ದರು.

ಗುತ್ತಿಗೆದಾರರು ಮಾಡಿದ್ದ ಕೆಲಸದಲ್ಲಿ ದೋಷಗಳಿವೆ ಎಂದು ಕೆಲ ಸ್ಥಳೀಯರು ಆರೋಪಿಸಿದ್ದರು. ಇದರಂತೆ ಶ್ರೀನಿವಾಸ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಆರೋಪ ಸತ್ಯವೆಂದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಶ್ರೀನಿವಾಸ್ ಅವರು ಕೆಲಸದಲ್ಲಿ ದೋಷವಿದೆ ಎಂದು ಹೇಳಿ, ಪ್ರಮಾಣಪತ್ರ ನೀಡಲು ನಿರಾಕರಿಸಿದ್ದರು.

ಇದರಂತೆ ಶ್ರೀನಿವಾಸ್ ಅವರ ಮೇಲೆ ಶತ್ರುತ್ವವನ್ನು ಬೆಳೆಸಿಕೊಂಡಿದ್ದ ಮಂಜುನಾಥ್ ಮತ್ತು ಕೇಶವ ಇಬ್ಬರೂ ಶ್ರೀನಿವಾಸ್ ಅವರನ್ನು ಹಿಂಬಾಲಿಸಿಕೊಂಡು ಹೋಗಿ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರು ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ಕಾವೇರಿ ಪ್ರತಿಭಟನೆ ಹಿನ್ನೆಲೆಯಲ್ಲಿ ಭದ್ರತೆ ಒದಗಿಸುವುದರಲ್ಲಿ ಕಾರ್ಯನಿರತರಾಗಿದ್ದೇವೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ ಎಂದು ಕುಡೂರು ಪಿಎಸ್ಐ ಹರೀಶ ಬಿ.ಸಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com