ಕಾವೇರಿ ಪ್ರತಿಭಟನೆ: ರೈತರು, ಮಾರಾಟಗಾರರ ಕಣ್ಣಲ್ಲಿ ನೀರು ತರಿಸಿರುವ ಈರುಳ್ಳಿ

ಕಾವೇರಿ ಪ್ರತಿಭಟನೆ ಬಿಸಿ ಈರುಳ್ಳಿ ಬೆಳೆಗಾರರಿಗೆ ತಟ್ಟಿದೆ. ತಮಿಳು ನಾಡಿಗೆ ಈರುಳ್ಳಿಯನ್ನು ಸಾಗಾಟ ಮಾಡಲು...
ಯಶವಂತಪುರ ಎಪಿಎಂಸಿ ಯಾರ್ಡ್ ನಲ್ಲಿ ಸಂಗ್ರಹವಾಗಿರುವ ಈರುಳ್ಳಿ
ಯಶವಂತಪುರ ಎಪಿಎಂಸಿ ಯಾರ್ಡ್ ನಲ್ಲಿ ಸಂಗ್ರಹವಾಗಿರುವ ಈರುಳ್ಳಿ

ಬೆಂಗಳೂರು: ಕಾವೇರಿ ಪ್ರತಿಭಟನೆ ಬಿಸಿ ಈರುಳ್ಳಿ ಬೆಳೆಗಾರರಿಗೆ ತಟ್ಟಿದೆ. ತಮಿಳು ನಾಡಿಗೆ
ಈರುಳ್ಳಿಯನ್ನು ಸಾಗಾಟ ಮಾಡಲು ಸಾಧ್ಯವಾಗದೆ ಬೇಡಿಕೆಗಿಂತ ಜಾಸ್ತಿ ಈರುಳ್ಳಿ ಕರ್ನಾಟಕದಿಂದ ಪೂರೈಕೆಯಾಗುತ್ತಿರುವುದರಿಂದ ಬೆಲೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ.

ನಮ್ಮ ರಾಜ್ಯದ ಅತಿದೊಡ್ಡ ಮಾರಾಟ ಕೇಂದ್ರವಾದ ಯಶವಂತಪುರದ ಎಪಿಎಂಸಿ ಯಾರ್ಡ್ ನಲ್ಲಿ  ವ್ಯಾಪಾರಸ್ಥರು ಕೇವಲ ಒಂದು ರೂಪಾಯಿಗೆ ಈರುಳ್ಳಿಯನ್ನು ಮಾರಾಟ ಮಾಡುತ್ತಿದ್ದಾರೆ.ತಮಿಳು ನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವುದನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಈರುಳ್ಳಿ, ಆಹಾರ ಧಾನ್ಯ ಮತ್ತು ಇತರ ಅಗತ್ಯ ವಸ್ತುಗಳ ಮಾರಾಟಗಾರರಿಗೆ ತಟ್ಟಿದೆ.

ಎಪಿಎಂಸಿ ಯಾರ್ಡ್ ನಲ್ಲಿರುವ ವರ್ತಕರು ಹೇಳುವ ಪ್ರಕಾರ, ಕರ್ನಾಟಕದಲ್ಲಿ ಬೆಳೆದ ಈರುಳ್ಳಿ ಮತ್ತು ಬೆಳ್ಳುಳ್ಳಿಗಳ ಗ್ರಾಹಕರು ಮುಖ್ಯವಾಗಿ ತಮಿಳು ನಾಡಿನವರು. ಕರ್ನಾಟಕದಿಂದ ಪ್ರತಿದಿನ ತಮಿಳು ನಾಡಿಗೆ 150ರಿಂದ 200 ಟ್ರಕ್ ಈರುಳ್ಳಿ ತಮಿಳು ನಾಡಿಗೆ ಹೋಗುತ್ತದೆ.
ರಾಜ್ಯ ಎಪಿಎಂಸಿ ಯಾರ್ಡ್ ನೌಕರರ ಒಕ್ಕೂಟದ ಅಧ್ಯಕ್ಷ ಪರಮೇಶ್, ಇದು ರಾಜ್ಯದಲ್ಲಿರುವ ಅತಿದೊಡ್ಡ ಯಾರ್ಡ್ ಆಗಿರುವುದರಿಂದ ಇಲ್ಲಿಗೆ ಪ್ರತಿದಿನ 10ರಿಂದ 15 ಲಕ್ಷ ಜನರು ಬರುತ್ತಾರೆ. ಆದರೆ ಕಾವೇರಿ ಹೋರಾಟ ಆರಂಭವಾದಾಗಿನಿಂದ ಶೇಕಡಾ 30ರಷ್ಟು ಜನರು ಇಲ್ಲಿಗೆ ಬರುವುದು ಕಡಿಮೆಯಾಗಿದೆ ಎನ್ನುತ್ತಾರೆ.


ಮಾರುಕಟ್ಟೆ ವರ್ತಕರ ಪ್ರಕಾರ, ಈರುಳ್ಳಿ ಮೇಲೆ ಇದರ ನೇರ ಹೊಡೆತ ಬಿದ್ದಿದೆ. ಈರುಳ್ಳಿ ಬೇಗನೆ ಕೊಳೆತು ಹೋಗುವುದರಿಂದ ಕಿಲೋಗೆ 1 ರೂಪಾಯಿಯಂತೆ ನಾವು ಮಾರಾಟ ಮಾಡುತ್ತಿದ್ದೇವೆ. ಇಲ್ಲದಿದ್ದರೆ ಉತ್ತಮ ಗುಣಮಟ್ಟದ ಈರುಳ್ಳಿಗಳು ಕೆಜಿಗೆ 6ರಿಂದ 8 ರೂಪಾಯಿಗೆ ಮಾರಾಟವಾಗುತ್ತವೆ. ನಂದೀಶ ಎಂಬ ವ್ಯಾಪಾರಿ, ಕೆಲವು ಟ್ರಕ್ ಚಾಲಕರು ಮಾರ್ಗ ಮಧ್ಯದಲ್ಲಿಯೇ ಸಿಕ್ಕಿ ಹಾಕಿಕೊಂಡು ಸಾಗಿಸಲಾಗದೆ ಕೊಳೆತ ಈರುಳ್ಳಿಗಳನ್ನು ಬಿಸಾಡಬೇಕಾದ ಪರಿಸ್ಥಿತಿ ಬಂತು ಎನ್ನುತ್ತಾರೆ.

ಅಕ್ಕಿ ಮಾರುಕಟ್ಟೆಗೂ ಕೂಡ ಬಂದ್, ಪ್ರತಿಭಟನೆ ಬಿಸಿ ತಟ್ಟಿದೆ. ವ್ಯಾಪಾರಿಗಳ ಪ್ರಕಾರ, ಕರ್ನಾಟಕದಿಂದ ತಮಿಳು ನಾಡಿಗೆ ಸುಮಾರು 200ರಿಂದ 250 ಟ್ರಕ್ ಅಕ್ಕಿ ಸಾಗಾಟವಾಗುತ್ತದೆ. ನಾವು ಅಕ್ಕಿಯನ್ನು ಕಳುಹಿಸಲು ಸಿದ್ಧವಿದ್ದರೂ ಚಾಲಕರು ಗಡಿ ದಾಟಿ ಹೋಗಲು ಹಿಂಜರಿಯುತ್ತಾರೆ. ಹೀಗಾಗಿ ಪರಿಸ್ಥಿತಿ ಸುಧಾರಿಸಿದ ಮೇಲೆ ತಮಿಳು ನಾಡಿಗೆ ಕಳುಹಿಸುತ್ತೇವೆ ಎನ್ನುತ್ತಾರೆ ಅಕ್ಕಿ ಮಾರಾಟಗಾರ ಶಿವಣ್ಣ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com