
ಕಲಬುರ್ಗಿ: ಮಾಜಿ ಸಚಿವ ಖಮರುಲ್ ಇಸ್ಲಾಂ ಅವರು ಮತ್ತೆ ಸಚಿವ ಸಂಪುಟ ಸೇರಲು ಸಾಕಷ್ಟು ಕಸರತ್ತನ್ನು ನಡೆಸುತ್ತಿದ್ದು, ಇದಕ್ಕೆ ಉದಾಹರಣೆ ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೆಚ್ಚಿಸಲು ಶನಿವಾರ ಹೈಡ್ರಾಮಾವೊಂದನ್ನು ಮಾಡಿದ್ದಾರೆ.
ನಿನ್ನೆಯಷ್ಟೇ ಸಿದ್ದರಾಮಯ್ಯ ಅವರು ಐವಾನ್-ಎ-ಶಾಹಿ ಅತಿಥಿ ಗೃಹದಲ್ಲಿ ಮಧ್ಯಾಹ್ನ 12.15ರ ಸುಮಾರಿಗೆ ಪತ್ರಿಕಾಗೋಷ್ಠಿಯೊಂದನ್ನು ನಡೆಸಿದ್ದರು. ಈ ವೇಳೆ ಖಮರುಲ್ ಇಸ್ಲಾಂ ಅವರೂ ಕೂಡ ತಮ್ಮ ಬೆಂಬಲಿಗರೊಂದಿಗೆ ಸ್ಥಳಕ್ಕೆ ಬಂದಿದ್ದಾರೆ.
ಸಿದ್ದರಾಮಯ್ಯ ಅವರು ಜ್ವರದಿಂದ ಬಳಲುತ್ತಿದ್ದು, ಪತ್ರಿಕಾಗೋಷ್ಠಿ ಮುಕ್ತಾಯವಾಗುತ್ತಿದ್ದಂತೆ ಕಲಬುರ್ಗಿಯ ಪ್ರಾದೇಶಿಕ ಆಯುಕ್ತರಾದ ಅಮ್ಲಾನ್ ಅದಿತ್ಯ ಬಿಸ್ವಾಸ್ ಅವರು, ಕೊಠಡಿಯಲ್ಲಿ ವಿಶ್ರಾಂತಿ ಪಡೆಯುವಂತೆ ಸಿಎಂಗೆ ಸಲಹೆ ನೀಡಿದ್ದಾರೆ. ಇದರಂತೆ ಸಿದ್ದರಾಮಯ್ಯ ಅವರು ವಿಶ್ರಾಂತಿಗಾಗಿ ಕೊಠಡಿಗೆ ಹೋಗಿದ್ದಾರೆ.
ಇದಕ್ಕೆ ತೀವ್ರ ಕೆಂಡಾಮಂಡಲವಾದ ಖಮರುಲ್ ಅವರು, ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರನ್ನು ಭೇಟಿಯಾಗಲು ಬಿಸ್ವಾಸ್ ಬಿಡುತ್ತಿಲ್ಲ ಎಂದು ಹೇಳಿ ಸ್ಥಳದಲ್ಲಿಯೇ ಹೈಡ್ರಾಮಾ ಮಾಡಲು ಆರಂಭಿಸಿದ್ದಾರೆ. ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಾಗನಗೌಡ ಪಾಟೀಲ್ ಸಂಕನಾಲ್ ಅವರು ಖಮರುಲ್ಲಾ ಅವರನ್ನು ಸಮಾಧಾನ ಪಡಿಸಲು ಆರಂಭಿಸಿದ್ದಾರೆ. ಈ ವೇಳೆ ಖಮರುಲ್ಲಾ ಅವರು ಕಿರುಚಾಡುತ್ತಿದ್ದ ಶಬ್ಧವನ್ನು ಕೇಳಿ ಸಿದ್ದರಾಮಯ್ಯ ಅವರು ಕೊಠಡಿಯಿಂದ ಹೊರಬಂದಿದ್ದಾರೆ.
ನಂತರ ಖಮರುಲ್ ಅವರನ್ನು ಸಮಾಧಾನ ಪಡಿಸಿ, ಅವರ ಬೆಂಬಲಿಗರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರನ್ನು ಭೇಟಿಯಾಗುತ್ತಿದ್ದಂತೆಯೇ ಖಮರುಲ್ಲಾ ಅವರ ಬೆಂಬಲಿಗರು ತಮ್ಮ ನಾಯಕನನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆಗೊಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
Advertisement