ವೇತನ ಹೆಚ್ಚಳ, ಕಾವೇರಿ ಬಿಸಿ: ಆರ್ಥಿಕ ಸಂಕಷ್ಟದಲ್ಲಿ ಕೆಎಸ್ಆರ್ ಟಿಸಿ
ಬೆಂಗಳೂರು: ಈಗಾಗಲೇ ಸಾಕಷ್ಟು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಇದೀಗ ಕಾವೇರಿ ಬಿಸಿ ಕೂಡ ತಟ್ಟಲು ಆರಂಭಿಸಿದೆ.
ಇತ್ತೀಚೆಗಷ್ಟೇ ನೌಕರರ ಪ್ರತಿಭಟನೆಗೆ ಮಣಿದಿದ್ದ ಸರ್ಕಾರ ಶೇ. 12.5 ರಷ್ಟು ನೌಕರರಿಗೆ ವೇತನವನ್ನು ಹೆಚ್ಚಳ ಮಾಡಿತ್ತು. ಇದರಂತೆ ಕೆಎಸ್ಆರ್ ಟಿಸಿ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದಂತಾಗಿತ್ತು. ಇದೀಗ ಕಾವೇರಿ ಪ್ರತಿಭಟನಾ ಬಿಸಿಯಿಂದಾಗಿ ಮತ್ತಷ್ಟು ಸಂಕಷ್ಟ ಎದುರಾದಂತಾಗಿದೆ.
ಕಾವೇರಿ ವಿವಾದಕ್ಕೆ ಹೆದರುತ್ತಿರುವ ಪ್ರಯಾಣಿಕರು, ಪ್ರತಿಭಟನಾ ದಿನದಂದು ಬುಕ್ ಮಾಡಿದ್ದ ಟಿಕೆಟ್ ಗಳನ್ನು ರದ್ದು ಮಾಡಲು ಆರಂಭಿಸಿದ್ದಾರೆ. ಇದರಿಂದಾಗಿ ಕೆಎಸ್ಆರ್ ಟಿಸಿ ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸುವಂತಾಗಿದೆ.
ಸೆಪ್ಟೆಂಬರ್ 6 ರಿಂದಲೂ ಕಾವೇರಿ ವಿವಾದ ಕುರಿತಂತೆ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಯುತ್ತಲೇ ಇದೆ. ಹೀಗಾಗಿ ಪ್ರತಿಭಟನಾ ದಿನದಂದು ಪ್ರಯಾಣ ಮಾಡಲು ಜನ ಹೆದರುತ್ತಿದ್ದಾರೆ. ಇದರಿಂದಾಗಿ ಬುಕ್ ಮಾಡಿದ ಟಿಕೆಟ್ ಗಳನ್ನು ರದ್ದು ಮಾಡುತ್ತಿದ್ದಾರೆ. ಪರಿಣಾಮ ಕೆಎಸ್ಆರ್ ಟಿಸಿಗೆ ರು. 20 ಕೋಟಿಗೂ ಹೆಚ್ಚು ನಷ್ಟವುಂಟಾಗಿದೆ ಎಂದು ಕೆಎಸ್ಆರ್ ಟಿಸಿ ಅಧಿಕಾರಿಗಳು ಹೇಳಿದ್ದಾರೆ.
ಸೆಪ್ಟೆಂಬರ್ 6 ರಿಂದ 13 ರವರೆಗೂ 10,308 ಟಿಕೆಟ್ ಗಳು ರದ್ದಾಗಿವೆ. ಇದರಿಂದಾಗಿ ರು.11.80 ಕೋಟಿಯಷ್ಟು ನಷ್ಟವುಂಟಾಗಿದೆ. ಸೆ. 13 ರಂದು ತಮಿಳುನಾಡಿಗೆ ಸೇವೆಯನ್ನು ಸ್ಥಗಿತ ಮಾಡಿದ್ದ್ರಿಂದಾಗಿ ಕೇವಲ ಒಂದೇ ದಿನದಲ್ಲಿ ರು.50 ಲಕ್ಷ ನಷ್ಟವುಂಟಾಗಿತ್ತು. ಪ್ರತಿಭಟನೆಯಿಂದಾಗಿ 14 ಬಸ್ ಗಳು ನಾಶಗೊಂಡಿವೆ. ಮಂಡ್ಯದಲ್ಲಿ 9 ಬಸ್ ಹಾಗೂ ತಮಿಳುನಾಡಿನಲ್ಲಿ 4, ಬೆಂಗಳೂರಿನಲ್ಲಿ 1 ಬಸ್ ನಾಶಗೊಂಡಿದೆ. ಕೇರಳದಲ್ಲಿ ಆಚರಿಸಲಾಗುವ ಓಣಂ ಹಬ್ಬಕ್ಕೆ ವಿಶೇಷ ಬಸ್ ಗಳ ನಿಯೋಜನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಖಾಸಗಿ ಬಸ್ ಗಳಿಗೂ ತಟ್ಟಿದೆ ಬಿಸಿ
ಇನ್ನು ಕಾವೇರಿ ಪ್ರತಿಭಟನೆಯಿಂದಾಗಿ ಖಾಸಗಿ ಬಸ್ ಗಳ ಮಾಲೀಕರೂ ಕೂಡ ನಲುಗುತ್ತಿದ್ದು, ಪ್ರತಿಭಟನೆ ವೇಳೆ ಖಾಸಗಿ ಬಸ್ ಗಳಿಗೆ ಸಾಕಷ್ಟು ಹಾನಿಯಾಗಿವೆ. ಲೆಕ್ಕವಿಲ್ಲದಷ್ಟು ಕೋಟಿಗಟ್ಟಲೆ ನಷ್ಟವುಂಟಾಗಿದೆ. ಪ್ರತಿಭಟನೆಯಿಂದಾಗಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಬರುವ ಪ್ರಯಾಣಿಕರ ಸಂಖ್ಯೆಗಳು ಕೂಡ ಕಡಿಮೆಯಾಗುತ್ತಿದೆ ಎಂದು ಖಾಸಗಿ ಬಸ್ ಗಳ ಮಾಲೀಕರು ಹೇಳಿದ್ದಾರೆ.
ಕರ್ನಾಟಕ ಮ್ಯಾಕ್ಸಿ ಕ್ಯಾಬ್ ಮತ್ತು ಮೋಟಾರ್ ಕ್ಯಾಬ್ ಮಾಲೀಕರ ಸಂಘದ ಅಧ್ಯಕ್ಷ ಭೈರವ ಸಿದ್ದರಾಮಯ್ಯ ಅವರು ಮಾತನಾಡಿ, ಪ್ರತಿಭಟನೆಯಿಂದಾಗಿ ಕರ್ನಾಟಕ ಮತ್ತು ತಮಿಳುನಾಡಿಗೆ ಪ್ರಯಾಣ ಮಾಡುವ ಜನರು ಟಿಕೆಟ್ ಗಳನ್ನು ರದ್ದು ಮಾಡುತ್ತಿದ್ದಾರೆ. ಇದರಿಂದಾಗಿ ಪ್ರತಿ ನಿತ್ಯ ರು.10-15 ಕೋಟಿ ಹಣ ನಷ್ಟವುಂಟಾಗುತ್ತಿದೆ. ಪ್ರತಿಭಟನೆ ಹಿನ್ನೆಲೆ ಭಯದಿಂದಾಗಿ ಓಣಂ ಹಬ್ಬದಂದು ಕೇರಳಗೆ ನಿಯೋಜಿಸಲಾಗಿದ್ದ ಬಸ್ ಗಳನ್ನು ರದ್ದು ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ