ಒಂದೇ ಒಂದು ತಪ್ಪು ಪದದಿಂದ ಬಯಲಾಯ್ತು ನಕಲಿ ಪ್ರಮಾಣ ಪತ್ರ ಜಾಲ

ಅಂಗವಿಕಲರೆಂದು ನಕಲಿ ಪ್ರಮಾಣ ಪತ್ರ ಪಡೆದು ಬಿಎಂಟಿಸಿ ಬಸ್ ಪಾಸ್ ಪಡೆಯುತ್ತಿದ್ದ ವಂಚಕರ ಜಾಲವೊಂದನ್ನ ಬೇಧಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಂಗವಿಕಲರೆಂದು ನಕಲಿ ಪ್ರಮಾಣ ಪತ್ರ ಪಡೆದು ಬಿಎಂಟಿಸಿ ಬಸ್ ಪಾಸ್ ಪಡೆಯುತ್ತಿದ್ದ ವಂಚಕರ ಜಾಲವೊಂದನ್ನ ಬೇಧಿಸಲಾಗಿದೆ.

ಮೂಗ ಹಾಗೂ ಕಿವುಡ ಎಂಬ ಪ್ರಮಾಣ ಪತ್ರ ಪಡೆದ ವ್ಯಕ್ತಿ, ಅಂಗವಿಕಲರ ಬಸ್ ಪಾಸ್ ಪಡೆಯಲು ಮೆಜಸ್ಟಿಕ್  ಬಿಎಂಟಿಸಿ ಮುಖ್ಯ ಕಾರ್ಯದರ್ಶಿ ಎಲ್ ಜಯಪ್ರಕಾಶ್ ಅವರ ಬಳಿ ಬಂದಿದ್ದಾನೆ, ಪ್ರಮಾಣ ಪತ್ರದಲ್ಲಿ ಬೆಂಗಳೂರು ಅರ್ಬನ್ ಎಂದು ಬರೆಯಲು, ಬೆಂಗಳೂರು croan ಎಂದು ತಪ್ಪು ಬರೆಯಲಾಗಿತ್ತು, ಇದರಿಂದ ಅನುಮಾನಗೊಂಡ ಜಯಪ್ರಕಾಶ್, ಪ್ರಮಾಣ ಪತ್ರದ ಮೇಲಿದ್ದ ಮುದ್ರೆ ಪರಿಶೀಲನೆ ಮಾಡಿದಾಗ ಅದು ನಕಲಿ ಎಂಬುದು ತಿಳಿದು ಬಂದಿದೆ. ಈ ಸಂಬಂಧ ಪ್ರಯಾಣಿಕನನ್ನು ವಿಚಾರಿಸಿದಾಗ ಅದು ನಕಲಿ ಪ್ರಮಾಣ ಪತ್ರ ಎಂದು ಹೇಳಿದ್ದಾನೆ.

ಬಿಎಂಟಿಸಿಯ ಎಲ್ಲಾ ಚೆಕಿಂಗ್ ಇನ್ಸ್ ಪೆಕ್ಟರ್ ಗಳಿಗೆ ಪಾಸ್ ಗಳನ್ನು ಪರಿಶೀಲಿಸುವಂತೆ ಆದೇಶಿಸಿದ್ದಾರೆ. ಪರಿಶೀಲನೆ ನಂತರ ಸುಮಾರು 168 ನಕಲಿ ಅಂಗವಿಕಲ ಬಸ್ ಪಾಸ್ ಗಳನ್ನು ವಶ ಪಡಿಸಿಕೊಂಡಿದ್ದಾರೆ.

ಅಂಗವಿಕಲರ ಪ್ರಮಾಣ ಪತ್ರ ನೀಡಲು 10 ಸಾವಿರದಿಂದ 15 ಸಾವಿರ ಹಣ ಪಡೆಯುತ್ತಿದ್ದ ಆರು ಮಂದಿಯ ಖತರ್ನಾಕ್ ತಂಡವೊಂದ ಬಗ್ಗೆ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ.

ನಂತರ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು . ಈ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದೆ. ಇಲಿಯಾಜ್ ಅಹ್ಮದ್, ಕಿಂಗ್ ಪಿನ್ ರುದ್ರಪ್ಪ, ಪ್ರಕಾಶ್, ಅಬ್ದುಲ್ ರಶೀದ್, ಸಿದ್ದಲಿಂಗಯ್ಯ ಮತ್ತು ಅನಂತ್ ಕುಮಾರ್ ಅವರನ್ನು ಬಂಧಿಸಲಾಗಿದೆ.ಹಲವು ವರ್ಷಗಳಿಂದ ಆರೋಪಿಗಳು ಈ ವಂಚನೆ ಜಾಲ ನಡೆಸುತ್ತಿದ್ದು, ಬಿಎಂಟಿಸಿಗೆ ಎಷ್ಟು ನಷ್ಟವಾಗಿದೆ ಎಂದು ಊಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com