ರಾಜ್ಯ ಪೊಲೀಸರಿಗೆ ಶೇ.35 ರಷ್ಟು ವೇತನ ಹೆಚ್ಚಳಕ್ಕೆ ಸಮಿತಿ ಶಿಫಾರಸು

ರಾಜ್ಯ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿ ವೇತನವನ್ನು ಶೇ 30 ರಿಂದ 35ರಷ್ಟು ಹೆಚ್ಚಿಸುವಂತೆ ರಾಘವೇಂದ್ರ ಔರಾದಕರ್ ನೇತೃತ್ವದ ಪೊಲೀಸ್‌ ವೇತನ ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿ ವೇತನವನ್ನು ಶೇ 30 ರಿಂದ 35ರಷ್ಟು ಹೆಚ್ಚಿಸುವಂತೆ  ರಾಘವೇಂದ್ರ ಔರಾದಕರ್ ನೇತೃತ್ವದ ಪೊಲೀಸ್‌ ವೇತನ ಪರಿಷ್ಕರಣಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ರಾಘವೇಂದ್ರ ಔರಾದಕರ್  ಅವರ ನೇತೃತ್ವದಲ್ಲಿ ರಚಿಸಿದ ವೇತನ ಪರಿಷ್ಕರಣಾ ಸಮಿತಿ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರಿಗೆ ಸೋಮವಾರ ವರದಿ ಸಲ್ಲಿಸಿತು.

ಸಮಿತಿಯ ಶಿಫಾರಸು ಆಧರಿಸಿ ವೇತನ ಪರಿಷ್ಕರಿಸಿದರೆ ಅಧಿಕಾರಿ ಮತ್ತು ಸಿಬ್ಬಂದಿಗೆ ರು. 6,500 ರಿಂದ ರು. 8,500 ರವರೆಗೆ ಹೆಚ್ಚಳವಾಗಲಿದೆ.

ವರದಿ ಸ್ವೀಕರಿಸಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಜಿ. ಪರಮೇಶ್ವರ್‌ ಅವರು, ವರದಿಯ ಶಿಫಾರಸುಗಳ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು. ಹಣಕಾಸು ಇಲಾಖೆಯ ಅನುಮೋದನೆ ಪಡೆದ ಬಳಿಕ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ವೇತನ ಪರಿಷ್ಕರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಹಾಲಿ ಕರ್ತವ್ಯದಲ್ಲಿರುವ ಸಿಬ್ಬಂದಿ ವೇತನ ಹೆಚ್ಚಿಸಿದರೆ ಸರ್ಕಾರಕ್ಕೆ ವಾರ್ಷಿಕ ರು.875 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಅವರು ತಿಳಿಸಿದ್ದಾರೆ.

ವೇತನ ಪರಿಷ್ಕರಿಸಿದರೆ ಹೆಡ್‌ ಕಾನ್‌ಸ್ಟೆಬಲ್‌ಗಳು ಪಡೆಯುತ್ತಿರುವ ವೇತನ ಕಾನ್‌ಸ್ಟೆಬಲ್‌ಗಳಿಗೆ ಸಿಗಲಿದೆ. ಈಗ ಇರುವ ವೇತನ ಪದ್ಧತಿಯನ್ವಯ ಕಾನ್‌ಸ್ಟೆಬಲ್‌ಗಳಿಗೆ ಮೂಲವೇತನ ಮತ್ತು ವಿವಿಧ ಭತ್ಯೆ ಸೇರಿ ರು. 19,606  ಮಾಸಿಕ ಸಂಬಳ ಸಿಗುತ್ತಿದೆ. ಪರಿಷ್ಕರಿಸಿದ ಬಳಿಕ ಈ ಮೊತ್ತ ರು. 23,350 ಕ್ಕೆ ಏರಿಕೆಯಾಗಲಿದೆ ಎಂದು ವಿವರಿಸಿದರು.

ಪೊಲೀಸರ ವೇತನ ಪರಿಷ್ಕರಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದಲೂ ಇತ್ತು. ಈ  ಕಾರಣದಿಂದಾಗಿ ಪರಿಷ್ಕರಣಾ ಸಮಿತಿ ರಚಿಸಲಾಗಿತ್ತು. ವಿವಿಧ ರಾಜ್ಯಗಳಲ್ಲಿನ ಪೊಲೀಸ್‌ ಸಿಬ್ಬಂದಿ ವೇತನ ಶ್ರೇಣಿಯನ್ನು ಅಧ್ಯಯನ ಮಾಡಿ ಸಮಿತಿ ವರದಿ ಸಲ್ಲಿಸಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ದೇಶದಲ್ಲಿ ಎಂಟನೆ ಸ್ಥಾನದಲ್ಲಿದೆ. ವೇತನ ಪರಿಷ್ಕರಣೆಯಾದ ಬಳಿಕ ಕರ್ನಾಟಕ ಐದನೆ ಸ್ಥಾನಕ್ಕೆ ಏರಲಿದೆ ಎಂದು ಹೇಳಿದರು.

ನಾಗರಿಕ ಮತ್ತು ಸಂಚಾರ ಪೊಲೀಸರಿಗೆ ವಿಶೇಷ ಭತ್ಯೆ ರು.1,000,  ದೈಹಿಕ ಆರೋಗ್ಯ ಭತ್ಯೆ ರು.500 ಮತ್ತು ಸಮವಸ್ತ್ರ ಭತ್ಯೆ ರು. 500 ಹಾಗೂ 3 ದಿನ ವಿಶ್ರಾಂತಿರಹಿತ ಸೇವಾ ಭತ್ಯೆ ರು. 2,500 ಹೆಚ್ಚಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com