ಪಿಒಕೆಯಲ್ಲಿ ದಾಳಿ ನಡೆಸಿದ ಯೋಧರಿಗೆ ಬೆಳಗಾವಿಯಲ್ಲಿ ತರಬೇತಿ!

ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ವಿರುದ್ಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಭಾರತೀಯ ಕಮಾಂಡೋಗಳು ಬೆಳಗಾವಿಯಲ್ಲಿ ತರಬೇತಿ ಪಡೆದಿದ್ದರು ಎಂಬ ಮಾಹಿತಿ ಇದೀಗ ಬೆಳಕಿಗೆ ಬಂದಿದೆ.
ಬೆಳಗಾವಿಯಲ್ಲಿರುವ ಕಮಾಂಡೋ ತರಬೇತಿ ಕೇಂದ್ರ
ಬೆಳಗಾವಿಯಲ್ಲಿರುವ ಕಮಾಂಡೋ ತರಬೇತಿ ಕೇಂದ್ರ

ಬೆಳಗಾವಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ವಿರುದ್ಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಭಾರತೀಯ ಕಮಾಂಡೋಗಳು ಬೆಳಗಾವಿಯಲ್ಲಿ ತರಬೇತಿ ಪಡೆದಿದ್ದರು ಎಂಬ ಮಾಹಿತಿ  ಇದೀಗ ಬೆಳಕಿಗೆ ಬಂದಿದೆ.

ಪತ್ರಿಕೆಯೊಂದು ವರದಿ ಮಾಡಿರುವಂತೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ 7 ಉಗ್ರ ನೆಲೆಗಳನ್ನು ಧ್ವಂಸಗೊಳಿಸಿದ ಭಾರತೀಯ ಯೋಧರು ಬೆಳಗಾವಿಯ ಮರಾಠಾ ಲಘು ಪದಾತಿ  ದಳ(ಎಂಎಲ್​ಐಆರ್​ಸಿ)ದ ಪ್ರದೇಶದಲ್ಲಿ ಕಮಾಂಡೋ ತರಬೇತಿ ಪಡೆದಿದ್ದರು ಎಂದು ಹೇಳಲಾಗಿದೆ. ದೇಶದಲ್ಲಿರುವ ಪ್ರಮುಖ ಸೇನಾ ತರಬೇತಿ ಶಾಲೆಗಳಲ್ಲಿ ಬೆಳಗಾವಿಯ ಮರಾಠಾ ಲಘು  ಪದಾತಿ ದಳ ಕಮಾಂಡ ತರಬೇತಿ ಶಾಲೆ ಕೂಡ ಒಂದಾಗಿದ್ದು, ಭಾರತೀಯ ಸೇನೆಯ ಎರಡನೇ ಹಾಗೂ ಏಕೈಕ ಕಿರಿಯ ಕಮಾಂಡೋ ತರಬೇತಿ ಶಾಲೆ ಎಂಬ ಹೆಗ್ಗಳಿಕೆಗೆ ಈ ಕೇಂದ್ರ  ಪಾತ್ರವಾಗಿದೆ.

1975ರಲ್ಲಿ ಸ್ಥಾಪನೆಯಾದ ಬೆಳಗಾವಿ ಎಂಎಲ್​ಐಆರ್​ಸಿ ಕಮಾಂಡೋ ತರಬೇತಿ ಶಾಲೆ ಆರಂಭವಾಗಿದ್ದು, ಸೇನೆಗೆ ಸೇರುವ ಕಿರಿಯ ಸೈನಿಕರು ಅಂದರೆ 21 ವರ್ಷದೊಳಗಿನ ಎಲ್ಲ  ಕಮಾಂಡೋಗಳು ಇಲ್ಲಿಂದಲೇ ತರಬೇತಿ ಪಡೆಯುತ್ತಾರೆ. ಬಳಿಕ ನುರಿತ ತರಬೇತಿಗಾಗಿ ಮಧ್ಯ ಪ್ರದೇಶ ಹಾಗೂ ಡೆಹ್ರಾಡೂನ್ ಗೆ ತೆರಳಬೇಕಾಗುತ್ತದೆ. ಭಾರತೀಯ ಸೇನೆಯ ಮೊದಲ  ಕಮಾಂಡೋ ತರಬೇತಿ ಶಾಲೆಯನ್ನು ಮಧ್ಯಪ್ರದೇಶದ ಮೌವ್ ಪ್ರದೇಶದಲ್ಲಿ ಸ್ಥಾಪಿಸಲಾಗಿತ್ತು. ಬಳಿಕ 1975ರಲ್ಲಿ ಬೆಳಗಾವಿಯ ಎಂಎಲ್​ಐಆರ್​ಸಿಯಲ್ಲಿ ಕಮಾಂಡೋ ತರಬೇತಿ ಶಾಲೆ  ಸ್ಥಾಪಿಸಲಾಯಿತು.

ಮೌವ್ ಪ್ರದೇಶದಲ್ಲಿ ಹಿರಿಯ ಕಮಾಂಡೋಗಳಿಗೆ ಮಾತ್ರ ಈಗ ತರಬೇತಿ ನೀಡಲಾಗುತ್ತಿದೆ. ಆದರೆ ಆರಂಭಿಕ ಹಂತದಲ್ಲಿ ಸೇನೆಗೆ ಸೇರುವ ಎಲ್ಲ ಕಮಾಂಡೋಗಳಿಗೆ ಬೆಳಗಾವಿಯ ಕಮಾಂಡೋ  ತರಬೇತಿ ಶಾಲೆಯಲ್ಲಿ ಕ್ಲಿಷ್ಟ ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಿಸುವ ನಿಟ್ಟಿನಲ್ಲಿ ವಿಶೇಷ ತರಬೇತಿ ನೀಡಲಾಗುತ್ತದೆ. ಪ್ರಸ್ತುತ ಭಾರತೀಯ ಸೇನೆಯಲ್ಲಿರುವ ಬಹುತೇಕ  ಕಮಾಂಡೋಗಳು ಬೆಳಗಾವಿಯ ಕಮಾಂಡೋ ತರಬೇತಿ ಶಾಲೆಯಲ್ಲೇ ತರಬೇತಿ ಪಡೆದಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com