ಉನ್ನತ ಶಿಕ್ಷಣ ಸಂಸ್ಥೆಗಳ ರ‍್ಯಾಂಕಿಂಗ್: ಬೆಂಗಳೂರು ಐಐಎಸ್ ಸಿಗೆ ಅಗ್ರಸ್ಥಾನ!

ಕೇಂದ್ರ ಸರ್ಕಾರ ಪ್ರಕಟಿಸಿರುವ ದೇಶದ 100 ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಕರ್ನಾಟಕ ಒಟ್ಟು ಏಳು ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದಿದ್ದು, ಕಳೆದ ಸಾಲಿನಂತೆಯೇ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆ ಅಗ್ರ ಸ್ಥಾನ ಪಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೇಂದ್ರ ಸರ್ಕಾರ ಪ್ರಕಟಿಸಿರುವ ದೇಶದ 100 ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಕರ್ನಾಟಕ ಒಟ್ಟು ಏಳು ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದಿದ್ದು, ಕಳೆದ ಸಾಲಿನಂತೆಯೇ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್  ಆಫ್ ಸೈನ್ಸ್ ಸಂಸ್ಥೆ ಅಗ್ರ ಸ್ಥಾನ ಪಡೆದಿದೆ.

ಕಳೆದ ತಿಂಗಳು "ಟೈಮ್ಸ್‌ ಹೈಯರ್‌ ಎಜುಕೇಶನ್‌' ಪಟ್ಟಿಯಲ್ಲಿ ಎಂಟನೇ ಸ್ಥಾನ ಗಳಿಸಿದ್ದ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸೋಮವಾರ ಪ್ರಕಟಿಸಿದ ದೇಶದ  ಉನ್ನತ ಶಿಕ್ಷಣ ಸಂಸ್ಥೆಗಳ ರಾಂಕಿಂಗ್ ನ ಎಲ್ಲ ವಿಭಾಗಗಳಲ್ಲಿಯೂ ಅಗ್ರ ಸ್ಥಾನ ಪಡೆದುಕೊಂಡಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಷನ್ಸ್‌ ರ‍್ಯಾಂಕಿಂಗ್ ಫ್ರೇಮ್ ವರ್ಕ್‌ (ಎನ್‌ಐಆರ್‌ಎಫ್) ಸಿದ್ಧ ಪಡಿಸಿರುವ ಈ ರ‍್ಯಾಂಕಿಂಗ್ ಪಟ್ಟಿಯಲ್ಲಿ ಏಳು  ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಐಐಟಿ) ಕೂಡ ಟಾಪ್‌ 10ರಲ್ಲೇ ಸ್ಥಾನ ಪಡೆದುಕೊಂಡಿವೆ. ಟಾಪ್‌ 10ರ ಕಡೆಯ ಎರಡು ಸ್ಥಾನಗಳಲ್ಲಿ ಬನಾರಸ್‌ ಹಿಂದೂ ವಿವಿ (ಬಿಎಚ್‌ಯು) ಮತ್ತು ಜವಾಹರಲಾಲ್‌ ನೆಹರೂ ವಿವಿ  (ಜೆಎನ್‌ಯು)  ಸ್ಥಾನ ಪಡೆದಿವೆ.

ಪಟ್ಟಿಯಲ್ಲಿ ಕರ್ನಾಟಕದ ಏಳು ಪ್ರಮುಖ ಶಿಕ್ಷಣ ಸಂಸ್ಥೆಗಳು
ಇನ್ನು ಕೇಂದ್ರ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಪ್ರಕಟಿಸಿರುವ ಪಟ್ಟಿಯಲ್ಲಿ ಕರ್ನಾಟಕದ ಒಟ್ಟು ಏಳು ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದಿದ್ದು, ಐಐಎಸ್ ಸಿ ಬೆಂಗಳೂರು (ಆಗ್ರ ಸ್ಥಾನ),  ಜವಾಹರ್ ಲಾಲ್ ನೆಹರು ಸೆಂಟರ್ ಫಾರ್ ಆಡ್ವಾನ್ಸ್ಡ್ ಸೈಂಟಿಫಿಕ್ ರೀಸರ್ಚ್ ಸಂಸ್ಥೆ, ಬೆಂಗಳೂರು (11ನೇ ಸ್ಥಾನ), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್, ಬೆಂಗಳೂರು (25ನೇ ಸ್ಥಾನ), ಮಣಿಪಾಲ ಅಕಾಡೆಮಿ ಆಫ್  ಹೈಯರ್ ಎಜುಕೇಷನ್, ಮಣಿಪಾಲ (30ನೇ ಸ್ಥಾನ), ಮೈಸೂರು ವಿವಿ (57ನೇ ಸ್ಥಾನ), ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ, ಸುರತ್ಕಲ್ (65ನೇ ಸ್ಥಾನ), ಜಗದ್ಗುರು ಶ್ರೀ ಶಿವರಾತ್ರೀಶ್ವರ ವಿಶ್ವ ವಿದ್ಯಾಲಯ, ಮೈಸೂರು (74ನೇ  ಸ್ಥಾನ) ಮತ್ತು ಕೆಎಲ್ ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಅಂಡ್ ರೀಸರ್ಚ್, ಬೆಳಗಾವಿ (100ನೇ ಸ್ಥಾನ) ಸಂಸ್ಥೆ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಬೆಂಗಳೂರಿನಲ್ಲಿರುವ ದೇಶದ ಪ್ರತಿಷ್ಠಿತ ಹಾಗೂ 108 ವರ್ಷಗಳ ಇತಿಹಾಸವುಳ್ಳ ಶಿಕ್ಷಣ ಸಂಸ್ಥೆ ಐಐಎಸ್‌ಸಿ. ವೈಜ್ಞಾನಿಕ ಸಂಶೋಧನೆ ಮತ್ತು ಉನ್ನತ ಶಿಕ್ಷಣ ನೀಡುವ ಮುಕ್ತ ವಿಶ್ವವಿದ್ಯಾಲಯ ಇದಾಗಿದೆ. ಮೈಸೂರು ಮಹಾರಾಜ  ನಾಲ್ಕನೇ ಕೃಷ್ಣರಾಜ ಒಡೆಯರ್‌ ಮತ್ತು ಜೆಮ್‌ ಶೇಟ್‌ ಜೀ ಟಾಟಾ ಅವರ ಸಹಕಾರದಿಂದ 1909ರಲ್ಲಿ ಆರಂಭವಾಯಿತು. ಈಗಲೂ ಇದನ್ನು "ಟಾಟಾ ಇನ್‌ ಸ್ಟಿಟ್ಯೂಟ್‌' ಎಂದು ಕರೆಯಲಾಗುತ್ತದೆ. ವಿಶ್ವದ ಅಗ್ರಸ್ಥಾನದಲ್ಲಿರುವ  ವಿಶ್ವವಿದ್ಯಾಲಯಗಳಲ್ಲಿ ಇದೂ ಒಂದು. ಐಐಎಸ್‌ ಸಿಯಲ್ಲಿ 3,700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಾರೆ. ರಾಜ್ಯದ ಎರಡು ಕಡೆಗಳಲ್ಲಿ ಕ್ಯಾಂಪಸ್‌ ಇದ್ದು, ಪ್ರಧಾನ ಕ್ಯಾಂಪಸ್‌ ಬೆಂಗಳೂರು ನಗರದ ಉತ್ತರ ಭಾಗದಲ್ಲಿದೆ.  ಇನ್ನೊಂದು ಕ್ಯಾಂಪಸ್‌ ಚಳ್ಳಕೆರೆಯಲ್ಲಿದೆ. ಐಐಎಸ್‌ಸಿ ವಿಶ್ವದ ಟಾಪ್‌ 10 ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ಮೊದಲ ವಿಶ್ವವಿದ್ಯಾಲಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com